Kannada NewsKarnataka NewsLatestPolitics

*ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ*

ನೀವು ಪ್ರಧಾನಿಯಾದರೆ ಕಾಂಗ್ರೆಸ್ ಸಹಿಸಿಕೊಳ್ಳುತ್ತದೆಯೇ ಎಂದು ಖರ್ಗೆ ಅವರಿಗೆ ನೇರ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ: ‘ನೀವು ಪ್ರಧಾನಿಯಾದರೆ ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳುತ್ತದೆಯೇ..’ಎಂದು ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.

ತಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಾಂಧವ್ಯದ ಬಗ್ಗೆ ಲಘುವಾಗಿ ಮಾತನಾಡಿದ ಖರ್ಗೆ ಅವರಿಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿಗಳು; “ಖರ್ಗೆ ಅವರೇ.. ನೀವು ಪ್ರಧಾನಮಂತ್ರಿಯಾದರೆ, ನೀವು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷ ಮುಕ್ತವಾಗಿ ಬೆಂಬಲ ಕೊಡುತ್ತದೆಯೇ? ಆ ಬಗ್ಗೆ ಹೇಳಿ” ಎಂದು ಮಾಜಿ ಪ್ರಧಾನಿಗಳು ಕೇಳಿದರು.

ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ದೇವೇಗೌಡರು; ರಾಜ್ಯಸಭೆಯಲ್ಲಿ ಮೊದಲು ಮಾತನಾಡಿದ ಪ್ರಧಾನಿ ಮೋದಿಯವರು ಹಿಂದಿನ ಪ್ರಧಾನ ಮಂತ್ರಿಗಳಾದ ಡಾ.ಮನಮೋಹನ್ ಸಿಂಗ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು; ಮನಮೋಹನ್ ಸಿಂಗ್ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಬಗ್ಗೆ ಪ್ರಧಾನಿ ಅವರು ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಅದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ.ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಂಡು ಕೆಟ್ಟದ್ದನ್ನು ಟೀಕಿಸಬೇಕು ಎಂದು ಖರ್ಗೆ ಹೇಳಿದ್ದರು.

ಈ ಮಾತಿನ ಭರದಲ್ಲಿ ಮಾಜಿ ಪ್ರಧಾನಿಗಳ ಹೆಸರನ್ನು ಎಳೆದು ತಂದಿದ್ದ ಖರ್ಗೆ ಅವರು; ‘ಮೋದಿ ಮತ್ತು ದೇವೇಗೌಡರ ಪ್ರೇಮ ಸ್ವಲ್ಪ ತಡವಾಗಿದೆ ಮೂಡಿದೆ’ ಎಂದಿದ್ದರು. ಇದಕ್ಕೆ ದೇವೇಗೌಡರು ಉತ್ತರ ನೀಡಿದರು.

ಸದನದಲ್ಲಿ ಖರ್ಗೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ ಮಾಜಿ ಪ್ರಧಾನಿಗಳು; ಮಲ್ಲಿಕಾರ್ಜುನ ಖರ್ಗೆ ಅವರು ಪ್ರಾಮಾಣಿಕ ವ್ಯಕ್ತಿ. ಡಾ.ಮನಮೋಹನ್ ಸಿಂಗ್ ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿ, ಆದರೆ, ಕಾಂಗ್ರೆಸ್ ತನ್ನನ್ನು ತಾನೇ ದುರ್ಬಲಗೊಳಿಸಿಕೊಳ್ಳುತ್ತಿದೆ. ಖರ್ಗೆ ಅವರು ಪ್ರಧಾನಿಯಂತಹ ಉನ್ನತ ಸ್ಥಾನಕ್ಕೆ ಏರಿದರೆ ಕಾಂಗ್ರೆಸ್ ಪಕ್ಷ ಸಹಿಸಿಕೊಳ್ಳುತ್ತದೆಯೇ? ಎಂದು ದೇವೇಗೌಡರು ಟೀಕಾ ಪ್ರಹಾರ ನಡೆಸಿದರು.

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಅಪೇಕ್ಷೆ ಆಗಿತ್ತು. ಅವರೇನು ನನ್ನ ಸ್ವಂತದವರು ಅಲ್ಲ, ನನ್ನ ಸ್ವಂತ ಮಗನೂ ಅಲ್ಲ. ಆದರೆ, ಅವರಿಗೆ ಅರ್ಹತೆ ಇದೆ. ಅವರು ಉನ್ನತ ಸ್ಥಾನಕ್ಕೆ ಬಂದರೆ ಕಾಂಗ್ರೆಸ್ ನಾಯಕರು ಸಹಿಸಿಕೊಳ್ಳುತ್ತಾರೆಯೇ? ಎಂದು ನೇರವಾಗಿ ಪ್ರಶ್ನಿಸಿದರು.

1991ರಲ್ಲಿ ನರಸಿಂಹ ರಾವ್ ಅವರು ಪ್ರಧಾನಿ ಆಗಿದ್ದರು, ಡಾ.ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ಈ ದೇಶವನ್ನು ಉಳಿಸಲು ಮನಮೋಹನ್ ಸಿಂಗ್ ಅವರು ಏನೆಲ್ಲಾ ಮಾಡಿದ್ದಾರೆ ಎಂಬುದರ ಬಗ್ಗೆ ನಾನು ಸಾಕಷ್ಟು ಮಾತನಾಡಬಲ್ಲೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಪ್ರಧಾನಿಗಳು ಟಾಂಗ್ ಕೊಟ್ಟರು.

ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿದ್ದಾಗ ಈ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು ಎನ್ನುವುದು ನನಗೆ ಗೊತ್ತಿದೆ. 130 ಟನ್ ಬಂಗಾರವನ್ನು ಭಾರತ ಸರ್ಕಾರ ವಿದೇಶಿ ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿತ್ತು. ಆ ಸಂದರ್ಭದಲ್ಲಿ ನರಸಿಂಹರಾವ್ ಅವರ ನೇತೃತ್ವದಲ್ಲಿ ದೇಶವನ್ನು ಉಳಿಸಲು ಮನಮೋಹನ್ ಸಿಂಗ್ ಏನೆಲ್ಲಾ ಮಾಡಿದರು ಎನ್ನುವುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ. ಅಂತಹ ಮನಮೋಹನ್ ಸಿಂಗ್ ಅವರು ಈ ಸದನದಲ್ಲಿ ಕಣ್ಣೀರು ಹಾಕಿದರು ಎಂದು ದೇವೇಗೌಡರು ಹೇಳಿದರು.

ಖರ್ಗೆಗೆ ಧನ್ಯವಾದ ಹೇಳಿದ ಮಾಜಿ ಪ್ರಧಾನಿ:

ಹಿಂದೆ ರಾಜ್ಯಸಭೆ ಚುನಾವಣೆ ಪ್ರಸಂಗವನ್ನು ನೆನಪಿಸಿಕೊಂಡ ಮಾಜಿ ಪ್ರಧಾನಿಗಳು; “ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ, ಖರ್ಗೆ ಅವರು ದೇವೇಗೌಡರು ಸೋಲಬಾರದು. ಒಂದು ವೇಳೆ ಹಾಗೆ ಆಗುವುದೇ ಆಗಿದ್ದರೆ ನಾನು ಚುನಾವಣೆ ಕಣದಲ್ಲಿಯೇ ಇರುವುದಿಲ್ಲ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು. ಅದಕ್ಕಾಗಿ ನಾನು ಖರ್ಗೆ ಅವರಿಗೆ ಆಭಾರಿ ಆಗಿದ್ದೇನೆ. ಇಂತಹ ಖರ್ಗೆ ಅವರನ್ನು, ಅದರಲ್ಲೂ 30ರಿಂದ 40 ವರ್ಷ ಸ್ವಚ್ಚ ರಾಜಕೀಯ ಮಾಡಿರುವ ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಆಗಲು ನೀಡುತ್ತದೆಯೇ?” ಎಂದು ಅವರು ನೇರವಾಗಿ ಪ್ರಶ್ನಿಸಿದರು.

ನಿಮ್ಮ ಹೆಸರನ್ನು ಪ್ರಧಾನಿ ಹುದ್ದೆಗೆ ನಿಮ್ಮದೇ ಮೈತ್ರಿಕೂಟದ ಕೆಲ ನಾಯಕರು ಪ್ರಸ್ತಾಪ ಮಾಡಿದರು. ಆದರೆ, I.N.D.I.A. ಮೈತ್ರಿಕೂಟದ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಈ ವ್ಯಕ್ತಿ ಸಿಎಂ ಆಗಬೇಕು ಎಂದು ನಾನು ಬಯಸಿದೆ. ನನ್ನ ಮಗ ಕುಮಾರಸ್ವಾಮಿ ಅವರ ಬದಲಿಗೆ ಖರ್ಗೆ ಅವರೇ ಸಿಎಂ ಆಗಬೇಕು ಎಂದು ನಾನು ಹೇಳಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್, ಖರ್ಗೆ ಬೇಡ, ನಿಮ್ಮ ಮಗನೇ ಸಿಎಂ ಆಗಲಿ ಎಂದು ಪಟ್ಟು ಹಿಡಿದರು. ಗುಲಾಂ ನಬಿ ಆಜಾದ್ ಹಾಗೂ ರಾಜಸ್ತಾನದ ಅಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅಂದು ನನ್ನ ಮನೆಗೆ ಬಂದು ಹಠ ಹಿಡಿದರು. ನನ್ನ ಮಗನನ್ನು ಸಿಎಂ ಮಾಡುವುದು ನನಗೆ ಇಷ್ಟ ಇರಲಿಲ್ಲ. ಖರ್ಗೆ ಅವರೇ ಸಿಎಂ ಆಗಬೇಕು ಎಂದು ಪಟ್ಟು ಹಿಡಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಅವರೇ ಅವರೇ ಸಿಎಂ ಆಗಬೇಕು ಎಂದರು. ಖರ್ಗೆ ಅವರು ಈ ಸದನದಲ್ಲಿಯೇ ಇದ್ದಾರೆ ಎಂದು ದೇವೇಗೌಡರು ಗಟ್ಟಿ ದನಿಯಲ್ಲಿ ಹೇಳಿದರು.

ಕುಮಾರಸ್ವಾಮಿ ಸರಕಾರ ತೆಗೆದಿದ್ದು ಖರ್ಗೆ ಅವರಲ್ಲ:

ಅವತ್ತು ಹದಿಮೂರು ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿ ಆಗಿದ್ದ ಖರ್ಗೆ ಅವರನ್ನು ಕೆಳಗೆ ಇಳಿಸಿದ್ದು ಯಾರು? ಆ ಕೆಲಸ ಮಾಡಿದ್ದು ಖರ್ಗೆ ಅವರಲ್ಲ. ಖರ್ಗೆ ಪ್ರಾಮಾಣಿಕ ವ್ಯಕ್ತಿ. ಆದರೆ, ಅದೇ ಪಕ್ಷದ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತೆಗೆದರು ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

ನಾನೆಂದೂ ಪಕ್ಷದಿಂದ ಪಕ್ಷವನ್ನು ಬದಲಿಸಿಲ್ಲ. ರಾಜಕೀಯ ನೈತಿಕತೆ ಕಳೆದುಕೊಂಡಿಲ್ಲ. ಆದರೆ, ಕಾಂಗ್ರೆಸ್ ನಾಯಕರು ನನ್ನ ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದ್ದಾಗ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಬಿಜೆಪಿಗೆ ಬೆಂಬಲ ನೀಡಿದ್ದೇನೆ. ಆ ವ್ಯಕ್ತಿಗಳ ಹೆಸರುಗಳನ್ನು ನಾನು ಇಲ್ಲಿ ಪ್ರಸ್ತಾಪ ಮಾಡುವುದಿಲ್ಲ, ಏಕೆಂದರೆ ಅವರು ಈ ಸದನರ ಸದಸ್ಯರು ಅಲ್ಲ. ನನ್ನ ಮಿತಿ ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿಗಳು ಗುಡುಗಿದರು.

ಪ್ರಜಾಪ್ರಭುತ್ವ ಜನರ ಹೃದಯಲ್ಲಿದೆ:

ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಅದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಪ್ರಜಾಪ್ರಭುತ್ವ ಈ ದೇಶದ ಜನರ ಹೃದಯದಲ್ಲಿ ಇದೆ. ಈ ದೇಶದಲ್ಲಿ ಸರ್ವಾಧಿಕಾರ ಎನ್ನುವುದು ಬರಲು ಸಾಧ್ಯವೇ ಇಲ್ಲ ಎಂದು ಮಾಜಿ ಪ್ರಧಾನಿಗಳು ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿದರು.

ಮಾಜಿ ಪ್ರಧಾನಿಗಳ ಎಲ್ಲಾ ಮಾತುಗಳನ್ನು ಸದನದಲ್ಲಿಯೇ ಹಾಜರಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೌನವಾಗಿ ಆಲಿಸಿದರು.

Related Articles

Back to top button