
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮನಗರ ಜಿಲ್ಲೆಯನ್ನು ’ನವಬೆಂಗಳೂರು’ ಎಂದು ಮರುನಾಮಕರಣ ಮಾಡಲು ಮುಂದಾಗಿರುವ ಬಿಜೆಪಿ ನೇತೃತ್ವದ ಸರ್ಕಾರದ ಯತ್ನದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇದೊಂದು ರಾಜಕೀಯ ಧ್ವೇಷದ ನಡೆ ಎಂದು ಗುಡುಗಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮೂಲಕ ಬಿಜೆಪಿ ನಡೆ ಖಂಡಿಸಿರುವ ಕುಮಾರಸ್ವಾಮಿ, ರಾಮನಗರ ಲೂಟಿಯಾಗದಿರಲಿ ಎಂದಿದ್ದಾರೆ. #SaveRamanagara ಹ್ಯಾಷ್ಟ್ಯಾಗ್ನಲ್ಲಿ ಟ್ವೀಟ್ಗಳನ್ನು ಮಾಡಿರುವ ಅವರು, ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಇಚ್ಛೆಯಿದ್ದರೆ ಜಿಲ್ಲೆಗಾಗಿ ನಾನು ಬಜೆಟ್ ನಲ್ಲಿ ಘೋಷಿದ ಹಣ ಬಿಡುಗಡೆ ಮಾಡಿ, ಇಲ್ಲ ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಗಮನ ಕೊಡಿ, ಅದನ್ನು ಬಿಟ್ಟು ಅಭಿವೃದ್ಧಿ ಹೆಸರಲ್ಲಿ ಹೆಸರು ಬದಲಾಯಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ಧಾರೆ.
ಸಿಎಂ ಬಿ ಎಸ್ ಯಡಿಯೂರಪ್ಪನವರೇ ನನ್ನ ಮೇಲಿನ ರಾಜಕೀಯ ವೈಷಮ್ಯದಿಂದ ರಾಮನಗರ ಜಿಲ್ಲೆ ಹೆಸರು ಬದಲಿಸುತ್ತಿರುವುದೇಕೇ? ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ನಿಮಗೆ ನನ್ನ, ನನ್ನ ಜನರ ಸಹಕಾರ ಸದಾ ಇರಲಿದೆ. ಆದರೆ ಹೆಸರು ಬದಲಿಸಿ ಜಿಲ್ಲೆ ಸಂಸ್ಕೃತಿ, ಅಸ್ಮಿತೆಗೆ ಬೆಂಕಿ ಇಡಬೇಡಿ.
ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಊರು ಇನ್ನೂ ಮುಂದೆ ಹೋಗಬಾರದು ಎಂದು ನಾಲ್ಕು ದಿಕ್ಕುಗಳಿಗೆ ಗಡಿ ಗೋಪುರ ಕಟ್ಟಿದ್ದರು. ಆದರೆ ನಾವು ಅದನ್ನೆಲ್ಲ ಎಂದೋ ದಾಟಿದೆವು. ಕೆಂಪೇಗೌಡರ ಇಚ್ಛೆ ಮೀರಿದೆವು. ಕೆರೆ ಕಾಲುವೆ ಮುಚ್ಚಿದೆವು. ಪರಿಣಾಮ ಬೆಂಗಳೂರು ಇಂದು ಸಮಸ್ಯೆಗಳ ಕೂಪ. ಅಭಿವೃದ್ಧಿಯ ಹೆಸರಲ್ಲಿ ಇದೇ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸುವುದು ಬೇಡ. ಇಲ್ಲಿಗೆ ಕೋಟಿ ಕುಳಗಳು ಬರದಿದ್ದರೂ ಬೇಡ. ಭೂಮಿ ಲೂಟಿಯಾಗದೇ ಇರಲಿ. ಕೆರೆಗಳು ಮುಚ್ಚದೇ ಇರಲಿ. ಸಮೃದ್ಧ ಜನಪದ ಸಂಸ್ಕೃತಿ ಅಳಿಯದಿರಲಿ. ಜನರ ಮುಗ್ಧತೆ ಬಲಿಯಾಗದೇ ಇರಲಿ ಎಂದಿದ್ದಾರೆ.
ಅಷ್ಟಕ್ಕೂ ಹೆಸರಲ್ಲಿ ಏನಿದೆ? ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ರಾಮನಗರದ ಹೆಸರು ಬದಲಾಯಿಸಲು ಬರುವ ಬಿಎಸ್ವೈ ಅವರು ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ? ಅಥವಾ ದಕ್ಷಿಣ ಕನ್ನಡಕ್ಕೆ ಇಡಬಲ್ಲರೇ? ಎಂದು ಪ್ರಶ್ನಿಸಿದ್ದಾರೆ.
ರಾಮನಗರ ತಾಲೂಕು ಮೊದಲು ‘ಕ್ಲೋಸ್ ಪೇಟೆ’ ಎಂದು ಇತ್ತು. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು ರಾಮನಗರ ತಾಲೂಕು ಮಾಡಿದರು. ಅದೇ ಹೆಸರನ್ನು ನಾನು ಇಡೀ ಜಿಲ್ಲೆಗೆ ಇಟ್ಟಿದ್ದೇನೆ. ಅದನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಮಾನ. ಈ ಜಿಲ್ಲೆ ಗಂಗರು ಆಳಿದ ನಾಡು. ಬಾಲಗಂಗಾಧರನಾಥರ, ಶಿವಕುಮಾರ ಶ್ರೀಗಳ ಜನ್ಮಭೂಮಿ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಶಕ್ತಿಸ್ಥಳ. ಇದೆ ಹೆಸರನ್ನು ಬೆಂಗಳೂರು ಎಂದು ಬದಲಿಸಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ ಎಂದಿದ್ದಾರೆ.