
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿ ಸರ್ಕಾರವನ್ನು ಬೀಳಿಸಲು ಯೋಜನೆ ರೂಪಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ. ಉದ್ಯಮಿ ಉದಯ್ ಗೌಡನನ್ನು ಮುಂದಿಟ್ಟುಕೊಂಡು ಈ ಕುರಿತಾಗಿ ಪ್ಲ್ಯಾನ್ ನಡೆಯುತ್ತಿದೆ. ಉದಯ್ಗೌಡ ಬೆಂಗಳೂರಿನಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾನೆ. ನನ್ನ ಸರ್ಕಾರದಲ್ಲಿ ಅದಕ್ಕೆಲ್ಲಾ ಕಡಿವಾಣ ಹಾಕಿದ್ದೆ. ಹಾಗಾಗಿ ಇವರೆಲ್ಲಾ ಸೇರಿ ಹಣ ಹಾಕಿ ನನ್ನ ಸರ್ಕಾರ ಬೀಳಿಸಿದರು. ಈಗ ಈ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಜೊತೆಗೆ ಸೇರಿ ಬಿಜೆಪಿ ಸರ್ಕಾರ ತೆಗೆಯಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಉದಯ್ಗೌಡ ಹಾಗೂ ಇತರರು ನನ್ನ ಸರ್ಕಾರ ಬೀಳಿಸಲು ಈ ಹಿಂದೆ ಯಡಿಯೂರಪ್ಪನವರಿಗೆ ಹಣ ಕೊಟ್ಟಿದ್ದರು. ಆದರೆ ಈಗ ಅವರೇ ಯಡಿಯೂರಪ್ಪನವರ ಸರ್ಕಾರ ತೆಗೆಯಲು ಹೊರಟಿದ್ದಾರೆ. ಹೀಗಾಗಿ ಉದಯ್ಗೌಡ ಅವರು ನಡೆಸುತ್ತಿರುವ ದಂಧೆಗಳ ಮೇಲೆ ದಾಳಿ ನಡೆಯುತ್ತಿವೆ ಎಂದರು.
ಚೆನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕರು ಮಂತ್ರಿಯಾಗುತ್ತೇನೆ ಎಂದು ಮಂಡ್ಯದವರೆಗೆ ಬ್ಯಾನರ್ಗಳನ್ನು ಹಾಕಿಸಿಕೊಂಡಿದ್ದರು. ಆದರೆ ಈಗ ಯಡಿಯೂರಪ್ಪನವರು ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಬಿಜೆಪಿ ಸರ್ಕಾರ ಕೆಡವಲು ರಣತಂತ್ರ ಹೆಣೆದಿದ್ದಾರೆ. ಅದಕ್ಕೆಲ್ಲಾ ಮೂಲ ಪುರುಷ ಇವರೇ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ