Wanted Tailor2
Cancer Hospital 2
Bottom Add. 3

*ಜೋಡೆತ್ತು ಎಂದವರು ನಡುರಸ್ತೆಯಲ್ಲಿ ಕೈ ಬಿಟ್ಟರು…ಮೈತ್ರಿ ಸರ್ಕಾರ ಹೋಗಿದ್ದು ಅವರಿಂದಲೇ; ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ*

ಸರ್ಕಾರದ ಪತನ ಗ್ಯಾರಂಟಿ, ಅವರು ತಿಹಾರ್ ಗೆ ಓಡುವುದು ಖಚಿತ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಪಬ್ಲಿಕ್ ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದರು.

ಬಿಡದಿಯ ತಮ್ಮ ತೋಟದಲ್ಲಿ ನಡೆದ ರಾಮನಗರ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

2018 ಸರ್ಕಾರ ಹೋಗಿದ್ದು ಡಿ.ಕೆ.ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ. ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ? ನಾನು ಕುಮಾರಣ್ಣನ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಆಮೇಲೆ ನೋಡಿದರೆ ಒಳಗೊಳಗೇ ಮಾಡುವುದೆಲ್ಲವನ್ನು ಮಾಡಿದರು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಸಭೆಯಲ್ಲಿ ಕನಕಪುರ ಕ್ಷೇತ್ರದ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ಅವರನ್ನು ನಂಬಿ ನಾನು ಕುತ್ತಿಗೆ ಕುಯ್ದುಕೊಂಡಿದ್ದೇನೆ, ನಿಮ್ಮ ಕುತ್ತಿಗೆಯನ್ನು ಕುಯ್ದಿದ್ದೇನೆ. ಅವರಿಂದ ನನಗೆ, ನಿಮಗೆ ಅನ್ಯಾಯ ಆಗಿದೆ. ಅದನ್ನು ಬಿಟ್ಟರೆ ಕನಕಪುರ ಜನರಿಗೆ ನನ್ನಿಂದ ಎಳ್ಳಷ್ಟೂ ಅನ್ಯಾಯ ಆಗಿಲ್ಲ. ಆಗಿರುವ ಅನ್ಯಾಯ ಸರಿ ಮಾಡುವ ಹೊಣೆ ನನ್ನದು ಎಂದು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋಟೆ ಕಟ್ಟಿ ಮೆರೆದೋರೆಲ್ಲ ಏನೇನೋ ಆಗಿ ಹೋದರು. ಅದು ಇವರಿಗೂ ಅನ್ವಯ ಆಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ 2ರಿಂದ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕು. ಅದಕ್ಕೆ ನೀವೆಲ್ಲರೂ ಶ್ರಮ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಮೈತ್ರಿಕೂಟದ ಮೂಲಕ ಇಡೀ ರಾಜ್ಯಕ್ಕೆ ದೇಶಕ್ಕೆ ನಾವು ಒಳ್ಳೆಯ ಸಂದೇಶ ಕೊಡಬೇಕು ಎಂದರು ಅವರು.

ನಾವೆಲ್ಲರೂ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ಯಾರೇ ಮೈತ್ರಿಕೂಟದ ಅಭ್ಯರ್ಥಿ ಆದರೂ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದ ಅವರು; ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಮೋಸ ಮಾಡಿದ ಹಾಗೆ ಇಲ್ಲಿಯೂ ನಾವು ಮಾಡಿದ್ದಿದ್ದರೆ ಆ ವ್ಯಕ್ತಿ (ಡಿ.ಕೆ.ಸುರೇಶ್) ಯ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಆದರೆ, ನಾವು ಮೈತ್ರಿ ಧರ್ಮ ಪಾಲಿಸಿದೆವು. ಅವರು ನಮಗೆ ಕೇಡು ಬಗೆದರು ಎಂದರು ಕುಮಾರಸ್ವಾಮಿ.

ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಹೋಗುತ್ತದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ. ಆ ಚುನಾವಣೆಗೆ ಆ ವ್ಯಕ್ತಿ ಅಭ್ಯರ್ಥಿ ಆಗುವುದೇ ಅನುಮಾನ, ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ ಎಂದು ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದರು ಅವರು.

ಜೀವನದಲ್ಲಿ ಅವರ (ಡಿಕೆಶಿ) ಜತೆ ಎಂದೂ ರಾಜಿ ಆಗಿಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸ್ತಾ ಇದ್ದೇನೆ. ಅವರು ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲಿಗೆ ಪರಮನೆಂಟಾಗಿ ಹೋದರೂ ಅಚ್ಚರಿ ಅಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಮಾರ್ಮಿಕವಾಗಿ ನುಡಿದರು.

ಶಾಮನೂರು ಶಿವಶಂಕರಪ್ಪನವರು ಧೈರ್ಯವಾಗಿ ಮಾತನಾಡಿದ್ದಾರೆ:

ವೀರಶೈವ ಲಿಂಗಾಯತರಿಗೆ ಎಷ್ಟು ಸ್ಥಾನ ಕೊಟ್ಟಿದ್ದೇವೆ ಎಂದು ಸಂಖ್ಯೆ ಹೇಳುವುದಲ್ಲ, ಯಾವ ಸ್ಥಾನ ಕೊಟ್ಟಿದ್ದೀರಿ ಎನ್ನುವುದು ಮುಖ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ; ಶಾಮನೂರು ಶಿವಶಂಕರಪ್ಪನವರು ತಮ್ಮ ಅಭಿಪ್ರಾಯವನ್ನು ಧೈರ್ಯವಾಗಿ ಹೇಳಿದ್ದಾರೆ. ಇಲ್ಲಿ ಸಂಖ್ಯೆಗಿಂತ ಇಲಾಖೆಯಲ್ಲಿ ಯಾವ್ಯಾವ ಅಧಿಕಾರಿಗೆ ಯಾವ ಇಲಾಖೆ ಕೊಟ್ಟಿದ್ದಾರೆ ಎಂಬುದು ಮುಖ್ಯ. ಕೆಲಸಕ್ಕೆ ಬಾರದ ಜಾಗ ಕೊಟ್ಟು, ಇಂತಹ ಸಮುದಾಯಕ್ಕೆ ಇಷ್ಟು ಸಂಖ್ಯೆ ಕೊಟ್ಟಿದ್ದೇವೆ ಎಂದರೆ ಅದರಿಂದ ಏನು ಉಪಯೋಗ? ಅವರು ಧೈರ್ಯವಾಗಿ ಹೇಳಿದ್ದಾರೆ ಎಂದರು ಮಾಜಿ ಮುಖ್ಯಮಂತ್ರಿಗಳು.

ಹಲವಾರು ಸಮುದಾಯಗಳಿಗೂ ಪರಿಸ್ಥಿತಿ ಏನಾಗಿದೆ ಎನ್ನುವುದು ಗೊತ್ತಿದೆ. ಆ ಮಾನದಂಡ ಏನಿದೆ ಎಂಬುದು ಕೂಡ ನನಗೆ ಗೊತ್ತಿದೆ. ಅಧಿಕಾರಿಗಳು ಮತ್ತು ನೌಕರರ ವರ್ಗದವರಲ್ಲಿ ಅಸಮಾಧಾನ ಇದೆ. ಇದು ಚುನಾವಣೆಯ ಸಂದರ್ಭದಲ್ಲಿ ಸ್ಫೋಟಗೊಳ್ಳಲಿದೆ ಎಂದು ಅವರು ತಿಳಿಸಿದರು.

Bottom Add3
Bottom Ad 2

You cannot copy content of this page