ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ; ಶಾಸಕ ಶ್ರೀನಿವಾಸ್ ಗೌಡ ವಿರುದ್ಧ ಹೆಚ್ ಡಿಕೆ ಹಿಗ್ಗಾ ಮುಗ್ಗಾ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಡ್ಡ ಮತದಾನ ಮಾಡಿ, ಕಾಂಗ್ರೆಸ್ ಗೆ ವೋಟ್ ಹಾಕಿದ್ದೇನೆ ಎಂದು ಹೇಳಿರುವ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ ಅದನ್ನು ಬಿಟ್ಟು ನಮ್ಮ ಪಕ್ಷದಲ್ಲಿ ಶಾಸಕರಾಗಿ ಆಯ್ಕೆಯಾಗಿ ಕಾಂಗ್ರೆಸ್ ಗೆ ಮತ ಹಾಕಲು ಯಾವ ನೈತಿಕತೆಯಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ನಿಂದ ಗೆದ್ದು ಅವರ ಜತೆ ಕೈ ಜೋಡಿಸಿದ್ದಾರೆ. ಶ್ರೀನಿವಾಸ್ ಗೌಡ ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಈ ಬಗ್ಗೆ ನನಗೆ ಬೆಳಿಗ್ಗೆಯೇ ಅನುಮಾನವಿತ್ತು. ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಸೇರಿ ಶ್ರೀನಿವಾಸ್ ಗೌಡವರನ್ನು ಸೆಳೆಯುವ ಯತ್ನ ಮಾಡಿದ್ದಾರೆ ಎಂದು ಹೇಳಿದ್ದೆ. ಈಗ ಕಾಂಗ್ರೆಸ್ ಗೆ ಮತಹಾಕಿರುವುದಾಗಿ ಅವರೇ ಹೇಳಿದ್ದಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ. ಕೋಲಾರ ಕ್ಷೇತ್ರದ ಜನತೆಗೆ ಅವಮಾನ ಮಾಡಿದ್ದಾರೆ, ಜನರ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಗುಡುಗಿದರು.
ಶ್ರೀನಿವಾಸ್ ಗೌಡ ಅಂತವರಿಗೆ ಶಿಸ್ತುಕ್ರಮದ ಅಗತ್ಯವಿಲ್ಲ. ಈ ರೀತಿ ಮಾಡಿ ಜನರ ಮುಂದೆ ಹೇಗೆ ಹೋಗ್ತಾರೆ? ಇವರು ಪ್ರಜಾಪ್ರಭುತ್ವ ಉಳಿಸ್ತಾರಾ? ಕಾಂಗ್ರ್ಸ್ ನವರಿಗೆ ಶ್ರೀನಿವಾಸ್ ಗೌಡ ಮತದಿಂದ ಸಿಕ್ಕಿದ್ದಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಗೆಲ್ಲಿಸಲು ಕಾಂಗ್ರೆಸ್ ಇಂತಹ ಕೆಲಸ ಮಾಡುತ್ತಿದೆ. ಇಂದು ಬಿಜೆಪಿ ಗೆದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಲಿದೆ. ಬೆಜೆಪಿಯನ್ನು ಗೆಲ್ಲಿಸಿ ಕಾಂಗ್ರೆಸ್ ನವರು ಜನರ ಮುಂದೆ ಹೇಗೆ ವೋಟ್ ಕೇಳುತ್ತಾರೆ? ಕಾಂಗ್ರೆಸ್ ನ ಇನ್ನೂ ಹಲವು ಶಾಸಕರು ವೋಟ್ ಹಾಕಲು ಬಂದಿಲ್ಲ. ಬಿಜೆಪಿಯನ್ನು ಗೆಲ್ಲಿಸಲು ಕಾಯ್ಕೊಂಡು ಕೂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
‘ಕೈ’ ಜತೆ ಸೇರಿದ್ದೇನೆ ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂದ ಜೆಡಿಎಸ್ ಶಾಸಕ