Wanted Tailor2
Cancer Hospital 2
Bottom Add. 3

*ಯತೀಂದ್ರಗೆ ಕರೆ ಮಾಡಿದ್ದು ಯಾರು?*

ಸಿದ್ದರಾಮಯ್ಯ, ಯತೀಂದ್ರ ಕಾಸಿಗಾಗಿ ಹುದ್ದೆ ವಿಡಿಯೋ ಲೀಕ್; ಇದಕ್ಕಿಂತ ಸಾಕ್ಷಿ ಬೇಕಾ? ಉನ್ನತ ತನಿಖೆಗೆ HDK ಒತ್ತಾಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಸಿಎಂ ಕಚೇರಿಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆಯ ಬಗ್ಗೆ ಹೊರಬಂದಿರುವ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕುರಿತ ವಿಡಿಯೋ ಬಹಿರಂಗವಾದ ಬೆನ್ನಲ್ಲಿಯೇ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ತುರ್ತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿ, ಅವರ ಪುತ್ರ, ಅವರ ಕಚೇರಿ, ಇಡೀ ಅವರ ಪಟಾಲಂ ವರ್ಗಾವಣೆ ದಂಧೆಯಲ್ಲಿ ಆರಂಭದಿಂದಲೂ ಎಡೆಬಿಡದೆ ತೊಡಗಿದೆ ಎಂದು ನಾನು ಅನೇಕ ಸಲ ಆರೋಪ ಮಾಡಿದ್ದೆ. ಈಗ ಆ ಆರೋಪ ಸತ್ಯವಾಗಿದೆ ಎಂದು ಅವರು ಹೇಳಿದರು.

ಹಿಂದೆ ಇದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಅವರು ಸೂಪರ್ ಸಿಎಂ ಎಂದು ಆರೋಪ ಮಾಡಿದ್ದರು. VST TAX ಎಂದು ದೂರಿದ್ದರು ಎಂದ ಮಾಜಿ ಮುಖ್ಯಮಂತ್ರಿ ಅವರು, ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯ ವಿಡಿಯೋ ತುಣುಕನ್ನು ಟಿವಿಯಲ್ಲಿ ಹಾಕಿ ಮಾಧ್ಯಮ ವರದಿಗಾರರಿಗೆ ತೋರಿಸಿದರು.

ಅಲ್ಲದೆ, ಈಗ ಸಿದ್ದರಾಮಯ್ಯ ನಡೆಸುತ್ತಿರುವ YST ದಂಧೆಯ ಕತೆ ಏನು? ಆಗೊಂದು ಮಾತು, ಹೀಗೊಂದು ಮಾತೇ? ಎಂದು ಮಾಜಿ ಮುಖ್ಯಮಂತ್ರಿ ಅವರು ತೀವ್ರ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.

ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು?:

ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ಹೇಳಿ ಅಪ್ಪ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ ? ನಾಲ್ಕೈದು ಲಿಸ್ಟ್ ಯಾವುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರಲ್ಲದೆ, ಇದ್ಯಾವ ಚೀಫ್ ಮಿನಿಸ್ಟರ್, ಸೂಪರ್ ಚೀಫ್ ಮಿನಿಸ್ಟರ್ ಎಂದು ಖಾರವಾಗಿ ಕೇಳಿದರು.

ಯತೀಂದ್ರ ಅವರು, ನಾನು ಹೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಪ್ಪ ಮಗನ ನಡುವೆ ನಡೆದ ಫೋನ್ ಚರ್ಚೆ ವ್ಯವಹಾರ ಜನರಿಗೆ ಗೊತ್ತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯ ಮಾಡಿದರು.

ಇವರು ಅಭಿವೃದ್ಧಿ ಬಗ್ಗೆ ಅಭಿರುಚಿ ಇರುವವರು. ಪಾಪ.. ಸೂಪರ್ ಸಿಎಂ ಸಾಹೇಬರು ಟಿಕ್ ಮಾಡಿದ ಲಿಸ್ಟ್ ಜನರ ಮುಂದೆ ಇಡಿ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು.

ಆ ಮಹದೇವು ಯಾರು?:

ಇಷ್ಟಕ್ಕೂ ಆ ಮಹದೇವು ಯಾರು? ಆತನಿಗೂ ಮುಖ್ಯಮಂತ್ರಿ ಕುಟುಂಬಕ್ಕೂ ಏನು ಸಂಬಂಧ? ಕಲೆಕ್ಷನ್ ಮಾಡುವುದಕ್ಕೆ ಆ ಗಿರಾಕಿಯನ್ನು ಸಿಎಂ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಒಬ್ಬ ಶಾಸಕ ಪತ್ರ ತೆಗೆದುಕೊಂಡು ಹೋದಾಗ, “ಬರೀ ಕಾಗದ ತಗೊಂಡು ಬಂದರೆ ಆಯಿತಾ? 30 ಲಕ್ಷ ರೂಪಾಯಿ ಹಣ ಕೊಡಬೇಕು ಎಂದು ಬಹಿರಂಗವಾಗಿ ಡಿಮಾಂಡ್ ಮಾಡಿದ್ದ ವ್ಯಕ್ತಿ ಈತ. ಈ ವ್ಯಕ್ತಿಯ ಬಗ್ಗೆ ಹಿಂದೆಯೇ ನಾನು ಹೇಳಿದ್ದೇನೆ. ಸಿಎಂ ಕಚೇರಿಯಲ್ಲಿ ವೈ ಎಸ್ ಟಿ ಕಲೆಕ್ಷನ್ ಆಗುತ್ತಿದೆ ಎಂದು ಹೇಳಿದಾಗ ನನ್ನ ಬಗ್ಗೆ ಲಘುವಾಗಿ ಮಾತಾನಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು ಮಾಜಿ ಮುಖ್ಯಮಂತ್ರಿಗಳು.

ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದವರು ಇವರು:

ಅಂದು ಯಡಿಯೂರಪ್ಪ , ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದ ಸಿದ್ದರಾಮಯ್ಯ ಅವರು, ತಮ್ಮ ಮಗನನ್ನು ಇಟ್ಟುಕೊಂಡು ಮಾಡುತ್ತಿರುವುದೇನು? ಎಂದ ಅವರು, ತಂದೆ ಎನ್ನುವ ಸಂಬಂಧ ಮನೆಯಲ್ಲಿ. ಹೊರಗೆ ಅಲ್ಲ. ಮೊದಲು ಅಪ್ಪಾ ಎನ್ನುತ್ತಾ, ಫೋನ್ ಕೊಡಿ ಆ ಮಹದೇವುಗೆ ಎಂದು ರಾಜ್ಯದ ಸಿಎಂಗೇ ತಾಕೀತು ಮಾಡುವ ಅಹಂಕಾರಕ್ಕೆ ಏನು ಹೇಳುವುದು? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ವಿಧಾನಸಭೆ ಚುನಾವಣೆಗೆ ಮುನ್ನ ಪೇ ಸಿಎಂ ಅಂತ ಪೋಸ್ಟರ್ ಹಾಕಿದ್ದರು ಕಾಂಗ್ರೆಸ್ ನವರು. ಈಗ ಪಂಚರಾಜ್ಯಗಳ ಚುನಾವಣೆಗೆ ಗಂಟುಮೂಟೆ ಸಮೇತ ಹೋಗುತ್ತಿದ್ದಾರೆ. ಇದಕ್ಕೆ ಯಾವ ಪೋಸ್ಟರ್ ಹಾಕಬೇಕು? ವರ್ಗಾವಣೆ ದಂಧೆ ಬಗ್ಗೆ ನಾನು ಹೇಳಿದಾಗ ಎಲ್ಲರೂ ನನ್ನ ಮೇಲೆ ಮುಗಿಬಿದ್ದರು. ಈಗ ಏನು ಹೇಳುತ್ತಾರೆ ಅವರೆಲ್ಲ. ಸಿಎಂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಂದು ಅವರು ಹೇಳಿದರು.

ಮಾತೆತ್ತಿದರೆ ಕುಮಾರಸ್ವಾಮಿ ಹೇಳೋದೆಲ್ಲ ಸುಳ್ಳು, ಅವನಿಗ್ಯಾಕೆ ಉತ್ತರ ಕೊಡಬೇಕು. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಅಂತಲೂ ಸಿದ್ದರಾಮಯ್ಯ ಹೇಳಿದ್ದರು. ಎಚ್ಚರವಾಗಿದ್ದರೂ ಈ ವಿಡಿಯೋ ಯಾಕೆ ಲೀಕ್ ಆಯಿತು? ವಸೂಲಿ ದಂಧೆಯ ಮಾಹಿತಿ ಹೇಗೆ ಹೊರಗೆ ಬರುತ್ತಿದೆ? ಸಿಎಂ ಅವರು ಈ ಮಾತನ್ನು ಯಾಕೆ ಹೇಳಿದರು? ನಾವು ತಿನ್ನುತ್ತಿದ್ದೇವೆ, ಸಾಕ್ಷಿ ಸಿಕ್ಕಿ ಬಿಡುತ್ತದೆ ಎಂದು ಹೀಗೆ ಹೇಳಿದ್ದರಾ? ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

ಆರೋಪ ಮಾಡಿದರೆ ಕುಮಾರಸ್ವಾಮಿ ಹಿಟ್ ಅಂಡ್ ರನ್ ಎನ್ನುತ್ತಿದ್ದವರಿಗೆ ಈ ವಿಡಿಯೋಗಿಂತ ಸಾಕ್ಷಿ ಬೇಕಾ? ಯಡಿಯೂರಪ್ಪ ಮಗನ ಬಗ್ಗೆ ಮಾತಾಡಿದ್ದರಲ್ಲ, ಇವರು ಅಂದು ಯಾವ ದಾಖಲೆ ಕೊಟ್ಟಿದ್ದರು? ಪೇ ಸಿಎಂ ಅಂತ ಬೀದಿ ಬೀದಿಲಿ ಪೋಸ್ಟರ್ ಹಾಕಿದ್ದರು. ಅದನ್ನು ಸಾಬೀತು ಮಾಡೋದಕ್ಕೆ ಯಾವ ಸಾಕ್ಷ್ಯ ಇಟ್ಟಿದ್ದರು? ನಾಚಿಕೆ ಆಗಬೇಕು ಇವರಿಗೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಬುದ್ದಿಭ್ರಮಣೆ ಎಂದಿದ್ದರು ಕಾಂಗ್ರೆಸ್ ನವರು. ನನ್ನದು ಏಕಾಂಗಿ ಕೂಗು ಅಂತ‌ ಅಣಕ ಮಾಡುತ್ತಿದ್ದರು. ಸಣ್ಣಪುಟ್ಟ ಪುಡಿ ಲೀಡರುಗಳು ನನ್ನ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರು. ಈಗ ಅವರೆಲ್ಲ ಏನು ಹೇಳುತ್ತಾರೆ? ವಿಡಿಯೋದಲ್ಲಿ ಏನು ಇಲ್ಲ, ನಮ್ಮ ಸಿಎಂ ಸತ್ಯ ಹರಿಶ್ಚಂದ್ರ ಎಂದು ಹೇಳುತ್ತಾರ? ಎಂದು ಅವರು ಕೆಂಡಾಮಂಡಲರಾದರು.

ಈ ಹಿಂದೆ ಯಡಿಯೂರಪ್ಪ ಅವರ ಸರಕಾರದಲ್ಲಿ ಎಲ್ಲಾ ವ್ಯವಹಾರವನ್ನು ವಿಜಯೇಂದ್ರ ಮಾಡುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು ಹಾಲಿ ಸಿಎಂ. ಆ ಹೇಳಿಕೆಯನ್ನು ಸಿದ್ದರಾಮಯ್ಯ ಏನಾದರೂ ಮರೆತಿದ್ದರೆ ನೆನಪು ಮಾಡಿಕೊಳ್ಳಲಿ. ನನ್ನ ಬಗ್ಗೆ ಪೋಸ್ಟರ್ ಹಾಕುವ ಮೂಲಕ ಕೀಳುಮಟ್ಟದ ಕೆಲಸ ಮಾಡಿದ್ದಾರೆ. ಎರಡು ಮೂರು ಸಾವಿರಕ್ಕೆ ಕರೆಂಟ್ ಕದಿಯುವ ದಾರಿದ್ರ್ಯ ನನಗೆ ಬಂದಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಏನು ದಾರಿದ್ರ್ಯ ಬಂದಿದೆ ಎಂಬುದನ್ನು ಹೇಳಬೇಕು ಎಂದು ತಿರುಗೇಟು ಕೊಟ್ಟರು.

ಕೆಲವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ, ಕೋಮವಾದಿ ಜನತಾದಳದಿಂದ ಬಿಟ್ಟು ಬಂದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಸಚಿವ ರಾಜಣ್ಣ ಅವರು; “ನಮ್ಮದು ಮಹಾ ಸಮುದ್ರ. ಚರಂಡಿ ನೀರು ಕೂಡ ಬರುತ್ತಿದೆ. ತುಂಬಿಸಿಕೊಳ್ತೀವಿ” ಎಂದಿದ್ದಾರೆ. ಕಾಂಗ್ರೆಸ್ ಯಾವತ್ತೂ ಒಳ್ಳೆಯ ನೀರು ತುಂಬಿಸಿಕೊಳ್ಳಲ್ಲ, ಚರಂಡಿ ನೀರೇ ತುಂಬಿಸಿಕೊಳ್ಳೋದು ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು‌.

ರಾಜ್ಯದಲ್ಲಿ ದೀಪಾವಳಿ ಬಳಿಕ ದಿನಕ್ಕೆ ಒಂದೊಂದು ರೀತಿಯ ಸುದ್ದಿಗಳು ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಕುಮಾರಸ್ವಾಮಿ ಮನೆಗೆ ವಿದ್ಯುತ್ ಅಲಂಕಾರಕ್ಕೆ ಕರೆಂಟ್ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಕರೆಂಟ್ ಕದಿಯುವಷ್ಟು ದಾರಿದ್ರ್ಯ ನನಗೆ ಬಂದಿದೆಯಾ ಎಂದು ಅವರು ಕೆರಳಿದರು.

ಯಾರೋ ಮಾಡಿದ ಅಚಾತುರ್ಯಕ್ಕೆ ನಾನು ತಲೆ ಮೇಲೆ ಹೊತ್ತುಕೊಂಡೆ ಎಂದು ಕೂಡ ಹೇಳಿದ್ದೇನೆ. ನಂತರ ಜೆಪಿ ಭವನದಲ್ಲಿ ಪೋಸ್ಟರ್ ಅಂಟಿಸಿದ್ದಾರೆ‌. ಕಾಂಗ್ರೆಸ್‌ಗೆ ಇದೊಂದು ಚಾಳಿ ಶುರುವಾಗಿದೆ. ಅದೇ ಅವರಿಗೆ ತಿರುಗುಬಾಣ ಆಗಿದೆ ಎಂದು ಅವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page