Wanted Tailor2
Cancer Hospital 2
Bottom Add. 3

*ಸಿಎಸ್ ಆರ್ ಫಂಡ್ ಶಾಲೆಗಳ ಪಟ್ಟಿ ಬಿಡುಗಡೆ; ದಾಖಲೆಗಳ ಮುಖೇನ HDKಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಂಭಾಷಣೆಯ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಎಸ್ ಆರ್ ಪಂಡ್ ಶಾಲೆಗಳ ಲಿಸ್ಟ್ ಬಿಡುಗಡೆ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಕಿದ್ದ ಸವಾಲಿಗೆ, ದಾಖಲೆಗಳ ಮುಖೇನ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವರುಣ ಕ್ಷೇತ್ರದ ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿ ಎಸ್ ಆರ್ ಫಂಡ್ ಪಡೆದ ಶಾಲೆಗಳ ಪಟ್ಟಿಗಳನ್ನು ಸಿಎಂ ಸಿದ್ದರಾಮಯ್ಯ ದಾಖಲೆಗಳ ಸಮೇತ ವಿವರಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಫೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಹೆಚ್.ಡಿ.ಕುಮಾರಸ್ವಾಮಿಯವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ.

ಫೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ). ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಾಗಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಲಗತ್ತಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ‍್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ದಿಯ ವಿಚಾರ ಅರ್ಥವಾಗುವಂತಹದ್ದಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಲ್ಲಹಳ್ಳಿ-ಹಾರೋಹಳ್ಳಿ ಗ್ರಾ.ಪಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಧವಗೆರೆ-ಕೀಳನಪುರ ಗ್ರಾ.ಪಂ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಟ್ನಹಳ್ಳಿಪಾಳ್ಯ -ಕೀಳನಪುರ ಗ್ರಾ.ಪಂ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಡಜನ – ದೇವಲಾಪುರ ಗ್ರಾ.ಪಂ. ಹಾಗೂ ಸರ್ಕಾರಿ ಪೌಢಶಾಲೆ ದೇವಲಾಪುರ ಈ 5 ಶಾಲೆಗಳಿಗೆ ರಿಪೇರಿ ಆಗಬೇಕಾದ ಒಟ್ಟು 8 ಕೊಠಡಿಗಳು ಹಾಗೂ ಅಂದಾಜು ವೆಚ್ಚ 20 ಲಕ್ಷ ರೂಪಾಯಿಗಳ ಬಗ್ಗೆ ದಾಖಲೆಗಳ ಮುಖೇನ ವಿವರಿಸಿದ್ದಾರೆ.


Bottom Add3
Bottom Ad 2

You cannot copy content of this page