ಪ್ರಗತಿವಾಹಿನಿ ಸುದ್ದಿ; ಮೈಸೂರು: ಬೆಳಗಾವಿ ಶಾಸಕರೇ ತಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ ಎಂದು ಗಲಾಟೆ ಮಾಡುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಿ ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದಾಗ್ಯೂ ಅಧಿಕಾರಿಗಳು ಹಣ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ ಸರ್ಕಾರ ಅಭಿವೃದ್ಧಿ ಕೆಲಸಗಳನ್ನೇ ಮರೆತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ಇಡೀ ರಾಜ್ಯದ ಅಭಿವೃದ್ಧಿ ಕಾರ್ಯವನ್ನೇ ಸ್ಥಗಿತ ಮಾಡಿದೆ. ನೆರೆ ಸಂತ್ರಸ್ತರಿಗೂ ಹಣ ಬಿಡುಗಡೆ ಮಾಡಿಲ್ಲ. ಬೆಳಗಾವಿ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದರು.
ಇದೇ ವೇಳೆ ರೈತರ ದಾಖಲೆ ಸರಿಯಿಲ್ಲ ಅದಕ್ಕೆ ಸಾಲ ಮನ್ನಾ ಆಗಿಲ್ಲ ಎಂಬ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಹೆಚ್ ಡಿಕೆ, ಸಾಲ ಮನ್ನಾದ ಬಗ್ಗೆ ಕೃಷಿ ಸಚಿವರಿಗೆ ಮಾಹಿತಿ ಇಲ್ಲ ಎಂದನಿಸುತ್ತದೆ. ನಾನು ಅಧಿಕಾರದಿಂದ ಇಳಿಯುವಾಗ ಕೇವಲ ಘೋಷಣೆ ಮಾಡಿಲ್ಲ. ಬದಲಿಗೆ ರೈತರ ಸಾಲ ಮನ್ನಾಕ್ಕಾಗಿ 25 ಸಾವಿರ ಕೋಟಿ ಹಣ ಹೊಂದಿಸಿ ಅಧಿಕಾರದಿಂದ ಇಳಿದಿದ್ದೇನೆ. ಈ ಹಣದಲ್ಲಿ 800 ಕೋಟಿ ಹಣವನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದೆ ಎಂದು ಗುಡುಗಿದ್ದಾರೆ.
ಸಾಲ ಮನ್ನ ಮಾಡುವಾಗ ನಾವು ರೈತರಿಂದ ಸರಳ ದಾಖಲೆ ಕೇಳಿದ್ದೆವು. ಒಂದೊಮ್ಮೆ ರೈತರ ದಾಖಲೆ ತಪ್ಪಿದ್ದರೆ ಅದನ್ನು ಸರಿಪಡಿಸುವುದು ಇಲಾಖೆಯ ಕೆಲಸ. ಈ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಓಡಾಡುವುದು ಬೇಡ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ