*ಸಿದ್ದರಾಮಯ್ಯ ಸ್ಥಿತಿ ನೋಡಿ ನನಗೆ ಅನುಕಂಪ ಬರುತ್ತಿದೆ; ವಿಪಕ್ಷನಾಯಕನ ಕ್ಷೇತ್ರ ಹುಡುಕಾಟಕ್ಕೆ ಮಾಜಿ ಸಿಎಂ HDK ವ್ಯಂಗ್ಯ*
ಪ್ರಗತಿವಾಹಿನಿ ಸುದ್ದಿ;ಮೈಸೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಪರ್ಧೆಯ ಕ್ಷೇತ್ರ ಹುಡುಕಾಟದ ವಿಚಾರವಾಗಿ ನನಗೆ ಅನುಕಂಪ ಬರುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೋಲಾರದಿಂದ ಸ್ಪರ್ಧೆಗೆ ಮುಂದಾಗಿದ್ದ ಸಿದ್ದರಾಮಯ್ಯನವರು ಹೈಕಮಾಂಡ್ ಹೆಸರು ಹೇಳಿ ಹಿಂದೆ ಸರಿದಿದ್ದಾರೆ. ಕಾರಣ ಹೈಕಮಾಂಡ್ ಕೋಲಾರ ಕ್ಷೇತ್ರ ಸೇಫ್ ಅಲ್ಲ ಎಂದು ಹೇಳಿರಬಹುದು. ಹಾಗಾಗಿ ಈಗ ಮತ್ತೆ ಕ್ಷೇತ್ರ ಹುಡುಕಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ತುಂಬಾ ನೋವಾಗುತ್ತಿದೆ ಎಂದರು.
ಸಿದ್ದರಾಮಯ್ಯ 5 ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿದ್ದವರು, ಎರಡು ಬಾರಿ ಉಪಮುಖ್ಯಮಂತ್ರಿಯಾಗಿವ್ವರು, 13 ಬಾರಿ ಬಜೆಟ್ ಮಂಡನೆ ಮೂಲಕ ರಾಜ್ಯದ ಜನರ ಹಿತ ಕಾದವರು. ಅಂತಹ ಹಿರಿಯ, ಅನುಭವಿ ರಾಜಕಾರಣಿ ಕಳೆದ ಒಂದು ವರ್ಷದಿಂದ ಚುನಾವಣೆಗೆ ಸ್ಪರ್ಧಿಸಲು ರಾಜ್ಯದಲ್ಲಿ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಅವರನ್ನು ಕಂಡು ನನಗೆ ಅನುಕಂಪಬರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಬಗ್ಗೆ ನಾನು ಲಘುವಾಗಿ ಮಾತನಾಡುತ್ತಿಲ್ಲ, ಆದರೆ ಅನುಕಂಪ ಬರುತ್ತಿದೆ. ಏನಪ್ಪ ಇದು ಒಬ್ಬ ಅನುಭವಿ ಹಿರಿಯ ರಾಜಕಾರಣಿ, ಮಾಜಿ ಸಿಎಂ ಅವರಿಗೆ ಈ ಸ್ಥಿತಿ ಬಂದರೆ ಇನ್ನು ಸಣ್ಣಪುಟ್ಟ ನಾಯಕರ ಕಥೆಯೇನು? . ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ನ್ನು ರಾಜ್ಯದಲ್ಲಿ ಮುನ್ನಡೆಸುವ ಶಕ್ತಿಯುಳ್ಳಂತಹ ಸಿದ್ದರಾಮಯ್ಯನವರಿಗೆ ಇಂದು ಕ್ಷೇತ್ರ ವಿಚಾರದಲ್ಲಿ ಆತಂಕ ಶುರುವಾಗಿದೆ. ಇಂತಹ ಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದು ಅವರೇ. ಇದು ಬೇಕಿತ್ತಾ ಎಂಬುದು ನನ್ನ ಪ್ರಶ್ನೆ ಎಂದು ಟಾಂಗ್ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ