Politics

*ರಾಜಕೀಯ ಸೇಡಿನಿಂದ ನನ್ನ ಜಮೀನಿನ ಸರ್ವೇ ಮಾಡಿಸಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ*

ಪ್ರಗತಿವಾಹಿನಿ ಸುದ್ದಿ: ಬಿಡದಿ ಬಳಿಯ ಕೇತಿಗಾನಹಳ್ಳಿಯಲ್ಲಿ ತಮ್ಮ ಜಮೀನು ಸರ್ವೆ ಸೇಡಿನ ರಾಜಕೀಯದ ಸೇಡಿನ ಭಾಗ ಎಂದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಇಷ್ಟು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ ಐಟಿ ರಚನೆ ಮಾಡುತ್ತಿದ್ದರು. ಈಗ ಐಎಎಸ್ ಅಧಿಕಾರಿಗಳ ಎಸ್ ಐಟಿಯನ್ನೂ ರಚನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಬುಧವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ಆ ಭೂಮಿಯನ್ನು ನಾನು ಖರೀದಿಸಿ 40 ವರ್ಷವಾಗಿದೆ. ಅಷ್ಟೂ ವರ್ಷಗಳಿಂದ ಈ ವಿಷಯವನ್ನು ಜೀವಂತವಾಗಿಟ್ಟು ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.

1984ರಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದು. ಸಿನಿಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದೇನೆ. ಅಂದಿನಿಂದಲೂ ಈ ಭೂಮಿಯ ಮೇಲೆ ಕೆಲವರ ಕಣ್ಣು ಬಿದ್ದಿದೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದ ಅಸಹಾಯಕತೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವೇ ಮೂಲಕ ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.

2012ರಿಂದಲೂ ನನ್ನ ವಿರುದ್ದ ತನಿಖೆ ಮಾಡುತ್ತಿದ್ದಾರೆ. ಏನು ಸಿಕ್ಕಿಲ್ಲ. ನಾನು ಸಿದ್ದರಾಮಯ್ಯನವರ ರೀತಿ ಸರಕಾರಿ ಜಮೀನು ಲೂಟಿ ಮಾಡಿಲ್ಲ. ಈಗ ಆಗಿರುವ ಎಲ್ಲಾ ತನಿಖೆಗಳು ಸಾಕಾಗುವುದಿಲ್ಲ ಎಂದು ಈಗ IAS ಅಧಿಕಾರಿಗಳ ನೇತೃತ್ವದಲ್ಲಿ SIT ತನಿಖೆ ಮಾಡಿಸ್ತಿದ್ದಾರೆ. ಯಾವುದೇ ತನಿಖೆ ಮಾಡಲಿ, ನಾನು ಮುಕ್ತವಾಗಿದ್ದೇನೆ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

Home add -Advt

1986ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರ ಅವರುಗಳು ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನಮಂತ್ರಿ, ಗೃಹ ಮಂತ್ರಿಯವರಿಗೆ ಪತ್ರ ಬರೆದಿದ್ದರು. ತಮ್ಮ ದೂರಿನಲ್ಲಿ ಅವರು ಕುಮಾರಸ್ವಾಮಿ ಅವರು ಜಮೀನು ಖರೀದಿಸಿದ್ದಾರೆ ಎಂದು ಹೇಳಿದ್ದರೇ ಹೊರತು ಕಬಳಿಸಿದ್ದಾರೆ ಎಂದು ಆರೋಪ ಮಾಡಿರಲಿಲ್ಲ. ನಾನು ಖರೀದಿ ಮಾಡಿರುವ ಆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆಯೇ ಹೊರತು ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸಿಲ್ಲ. ನಾನು ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸಚಿವರು ಹೇಳಿದರು.

ರಾಜ್ಯದ ಸಂಪತ್ತನ್ನು ರಕ್ಷಿಸುವವನ ರೀತಿ ವರ್ತಿಸುವ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಎನ್ನುವ ವ್ಯಕ್ತಿ ನನ್ನ ಜಮೀನು ವಿಷಯದ ಬಗ್ಗೆ ಆರೋಪ ಮಾಡಿದ್ದಾರೆ. ಆದರೆ, ರಾಜ್ಯ ಹೈಕೋರ್ಟ್ ನಿಂದ ನನಗೆ ಯಾವುದೇ ನೋಟೀಲ್ ಬಂದಿಲ್ಲ ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಈ ಸರಕಾರ ಕೆಲವರನ್ನು ಕರೆತಂದು ನನ್ನ ಮೇಲೆ ಆರೋಪ ಮಾಡಿಸುವ ಕೆಲಸ ಮಾಡುತ್ತಿದೆ. ಅವರೆಲ್ಲ ಈಗ ಎಲ್ಲಿಂದ ಉದ್ಭವ ಆದರು ಎಂದು ಗೊತ್ತಿಲ್ಲ. 40 ವರ್ಷಗಳ ಹಿಂದೆ ಖರೀದಿ ಮಾಡಿದ ಭೂಮಿಯನ್ನು ಅನೇಕ ಸಲ ಸರ್ವೇ ಮಾಡಿಕೊಂಡಿದ್ದಾರೆ. ಸರ್ವೇ ನಡೆಯುವಾಗ ಕೆಲವು ಕಾಂಗ್ರೆಸ್ ಪುಡಾರಿಗಳು ಕೆಲವರನ್ನು ಕರೆದುಕೊಂಡು ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಿಸಿದ್ದಾರೆ. 40 ವರ್ಷಗಳಿಂದ ಯಾರೂ ನನ್ನ ಬಳಿ ಬಂದಿರಲಿಲ್ಲ. ಈಗ ಎಲ್ಲಿಂದ ಬಂದರು ದೂರುದಾರರು? ಎಂದು ಕೇಂದ್ರ ಸಚಿವರು ಕೇಳಿದರು.

ಕಾಂಗ್ರೆಸ್ ಸರಕಾರ ರಚನೆ ಮಾಡಿರುವ ಎಸ್ ಐಟಿ ನನಗೆ ಯಾವುದೇ ನೊಟೀಸ್ ನೀಡದೇ ಸರ್ವೇ ಮಾಡಲು ಹೊರಟಿತ್ತು. ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ನಾನು ಕರೆ ಮಾಡಿ ಮಾತನಾಡಿದೆ. ನೋಟಿಸ್ ಕೊಟ್ಟು ಸರ್ವೇ ಮಾಡಿ ಎಂದು ಹೇಳಿದ್ದೆ. ಜಾಗತಿಕ ಮಟ್ಟದ ಭೂಮಪಕರನ್ನು ಕರೆತಂದು ಸರ್ವೇ ಮಾಡಿಸಿಕೊಳ್ಳಿ ಎಂದು ಹೇಳಿದ್ದೆ. ನಾನು ಖರೀದಿ ಮಾಡಿರುವ ಭೂಮಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಈ ರಾಜ್ಯದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ, ಎಷ್ಟೆಲ್ಲಾ ಭೂಮಿ ಲೂಟಿ ಹೊಡೆದಿದ್ದಾರೆ ಎಂಬುದಕ್ಕೆ ದೊಡ್ಡ ಇತಿಹಾಸವೇ ಇದೆ. ಅವರೆಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು, ತನಿಖಾ ವ್ಯವಸ್ಥೆಯನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅವರ ಹಣೆಬರಹದ ದಾಖಲೆಗಳು ಕೂಡ ನನ್ನ ಬಳಿ ಇವೆ ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಸಿಎಂ ಮೇಲೆ ವಾಗ್ದಾಳಿ ನಡೆಸಿದ ಹೆಚ್ಡಿಕೆ:

ದೇವೇಗೌಡರನ್ನು ಮೋದಿ ಅವರ ಚಿಯರ್ ಲೀಡರ್ ಎಂದು ಆಗೌರವದ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು; ದೇವೆಗೌಡರ ಬಗ್ಗೆ ಮಾತನಾಡುವ ಮುನ್ನ ಅವರು ತಮ್ಮ ಯೋಗ್ಯತೆ ಅರಿತುಕೊಂಡರೆ ಉತ್ತಮ ಎಂದು ಕಿಡಿ ಕಾರಿದರು.

ರಾಜ್ಯದ ನೀರಾವರಿಗೆ ದೇವೇಗೌಡರು ಏನು ಮಾಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ. ದೇವೇಗೌಡರು ನೀರಾವರಿ ಬಗ್ಗೆ, ರಾಜ್ಯದ ಜನತೆಯ ರಕ್ಷಣೆ ಮಾಡುವುದಕ್ಕೆ ಇವರಿಂದ ಹೇಳಿಸಿಕೊಳ್ಳಬೇಕಿಲ್ಲ. ಸಿದ್ದರಾಮಯ್ಯ ಅವರೇ.. ಈ ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಿಮ್ಮ ಕೊಡುಗೆ ಏನು? ನೀರಾವರಿಗೆ ನಿಮ್ಮ ಕೊಡುಗೆ ಏನು? ಎಂದು ಯಾವತ್ತಾದರೂ ಒಂದು ದಿನ ನೀರಿನ ಬಗ್ಗೆ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಾತಾಡಿದ್ದಾರಾ? ಎಲ್ಲಿಯಾದರೂ ಹೋರಾಟ ಮಾಡಿದ್ದರಾ? 102 ಡಿಗ್ರಿ ಜ್ವರ ಇದ್ದರೂ, ಕೈಯ್ಯಲ್ಲಿ ಐವಿ (iv) ಇದ್ದರೂ ರಾಜ್ಯಸಭೆಯಲ್ಲಿ ಗೋದಾವರಿ-ಕೃಷ್ಣ-ಕಾವೇರಿ ನದಿಗಳ ಜೋಡಣೆ ಯೋಜನೆ ಬಗ್ಗೆ ಮಾತಾಡಿದ್ದಾರೆ. ರಾಜ್ಯದ ನೀರಾವರಿ ಬಗ್ಗೆ ಇವರಿಂದ ದೇವೇಗೌಡರು ಹೇಳಿಸಿಕೊಳ್ಳಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ವಿರುದ್ದ ಸಚಿವರ ವಾಗ್ದಾಳಿ:

ತಮ್ಮ ಕೊಡುಗೆ ಬಗ್ಗೆ ಕೇಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟ ಸಚಿವ ಕುಮಾರಸ್ವಾಮಿ ಅವರು, ರಾಜ್ಯಕ್ಕೆ ಅವರ ಕೊಡುಗೆ ಏನು? ದುಡ್ಡು ಹೊಡೆದಿರುವುದೇ ಅವರ ಕೊಡುಗೆ. ಇನ್ನೊಂದು ವಾರ ನೋಡೋಣ‌. ಈ ಸರಕಾರ ಏನೇನು ಮಾಡುತ್ತದೆ ಎಂದು. ಆಮೇಲೆ ಮಾತನಾಡುತ್ತೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಇವರ ಗಮನವೇ ಇಲ್ಲ ಎಂದು ಟೀಕಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button