*ಮೂರು ದಶಕದ ನಂತರವೂ ಕಾಂಗ್ರೆಸ್ ಮಹಿಳಾ ವಿರೋಧಿ ಮನಸ್ಥಿತಿ ಬದಲಾಗಿಲ್ಲ ಎಂದು HDK ಕಿಡಿ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಸೋಲುವ ಮೂಲಕ ಲೋಕಸಭೆಯಲ್ಲಿ ಮೂವತ್ತು ವರ್ಷಗಳ ಹಿಂದಿನ ಕರಾಳ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬೆಂಬಲ ಸಿಗದೆ ಮಸೂದೆ ಬಿದ್ದುಹೋದ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; 1996 ರಿಂದ 2026; ಕರಾಳ ಇತಿಹಾಸ ಮರುಕಳಿಸಿದೆ! ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ ಕೊಂಚವೂ ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂದು ಹೆಚ್.ಡಿ. ದೇವೇಗೌಡರ ನೇತೃತ್ವದ ಸಂಯುಕ್ತ ರಂಗ ಸರಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲು ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅದರ ಸಹಚರ ಶಕ್ತಿಗಳು ಆ ಪ್ರಯತ್ನವನ್ನು ಸಂಘಟಿತವಾಗಿ ವಿಫಲಗೊಳಿಸಿದ್ದವು. ಇಂದು ಆವತ್ತು ಮಹಿಳೆಯರಿಗೆ ಆಗಿದ್ದ ಐತಿಹಾಸಿಕ ಅನ್ಯಾಯ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟಹೆಜ್ಜೆ ಇರಿಸಿದ್ದರು. ಪುನಾ ಅದೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಸೇರಿ ಸನ್ಮಾನ್ಯ ಮೋದಿ ಅವರ ಪ್ರಯತ್ನಕ್ಕೆ ತಡೆಯೊಡ್ಡಿವೆ ಎಂದು ಅವರು ಕಿಡಿಕಾರಿದ್ದಾರೆ.
ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನ. ಇದಕ್ಕೆ ಕಾರಣರಾದ ಎಲ್ಲರೂ ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಷ್ಟ್ರದ ನಾರಿಶಕ್ತಿಗೆ ನನ್ನ ಮನವಿ ಇಷ್ಟೇ, ನಿಮಗೆ ನಿರಾಶೆ ಬೇಕಿಲ್ಲ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದೊಂದು ದಿನ ನಿಮಗೆ ಅಗ್ರಮನ್ನಣೆ ಸಿಕ್ಕೇ ಸಿಗುತ್ತದೆ. 33% ಮಹಿಳಾ ಮೀಸಲು ಗುರಿ ಸಾಧಿಸುವುದು ಶತಸಿದ್ಧ ಎಂದು ಅವರು ಭರವಸೆ ನೀಡಿದ್ದಾರೆ.


