Kannada News

ಸೀಲ್ ಡೌನ್ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ: ಸರ್ಕಾರಕ್ಕೆ ಹೆಚ್ ಡಿಕೆ ಮನವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆಯೇ? ಮಾಡುವುದಿದ್ದರೆ ಯಾವ್ಯಾವ ಜಿಲ್ಲೆಗಳಿಗೆ ಇದು ಅನ್ವಯವಾಗಲಿದೆ? ಸೀಲ್‌ಡೌನ್ ಅವಧಿಯಲ್ಲಿ ಏನೆಲ್ಲ ಲಭ್ಯ ಇರಾತ್ತೆ? ಏನು ಲಭ್ಯವಿರಲ್ಲ ಎಂಬ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಜನರು ಆತಂಕಕ್ಕೀಡಾಗುತ್ತಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವಾ ಹಿನ್ನಾಲೆಯಲ್ಲಿ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಜನತೆ ಭೀತಿಗೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಸೀಲ್ ಡೌನ್ ಭೀತಿ ಜನರನ್ನು ಸಮೂಹಸನ್ನಿಗೆ ದೂಡಿರುವಾಗಲೇ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಹಾಗೇನಾದರೂ ದಿನಸಿ ಅಂಗಡಿಗಳು, ಔಷಧಾಲಯಗಳು ಭೀತಿಯಿಂದ ಮುಚ್ಚಿದರೆ, ಜನರಿಗೆ ಆಹಾರ, ಔಷಧಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ತುರ್ತು ಎದುರಾಗಿದೆ.

ಸೀಲ್ ಡೌನ್ ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ. ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು ಎಂದಿದ್ದಾರೆ.

ಅಲ್ಲದೇ ಲಾಕ್ ಡೌನ್ 3ನೇ ವಾರದ ಮುಕ್ತಾಯಕ್ಕೆ ಬರುತ್ತಿದ್ದರೂ ಬೆಳೆದ ಬೆಳೆ ಮಾರಾಟವಾಗದೆ ಜಮೀನಿನಲ್ಲೇ ಕೊಳೆಯುತ್ತಿರುವುದನ್ನು ಕಂಡು ರೈತರು ‘ಹೆತ್ತ ಮಕ್ಕಳು’ ಅಕಾಲ ಮರಣಕ್ಕೀಡಾದಂತೆ ಸಂಕಟ ಪಡುತ್ತಿದ್ದಾರೆ. ರೈತರ ಸಂಕಷ್ಟ ಪರಿಹರಿಸಲು ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬ ರೈತರು ಬೆಳೆದ ಬೆಳೆಗಳನ್ನು ಸಮೀಕ್ಷೆ ಮಾಡಿ ಮೂರು ದಿನದಲ್ಲಿ ಪರಿಹಾರ ನೀಡಲಿ ಎಂದು ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಸುಗಮ ಮಾರಾಟ, ಸಾಗಾಣಿಕೆ ಮತ್ತು ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಇನ್ನೂ ಕ್ರಿಯಾಶೀಲವಾಗಿಲ್ಲ. ಬರೀ ಚಿಂತನ-ಮಂಥನದಲ್ಲೇ ಕಾಲ ಕಳೆಯುವುದನ್ನು ಬಿಟ್ಟು ತಕ್ಷಣವೇ ರೈತರ ನೆರವಿಗೆ ಧಾವಿಸಬೇಕು ಎಂದು ಮನಮಿ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button