ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾವು 17 ಜನರು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆಗೆದಿದ್ದೇವೆ. ಹಾಗಾಗಿ ನಮ್ಮ ಹೋರಾಟಕ್ಕೆ ಒಂದು ಗೌರವ ಕೊಡಬೇಕಿದೆ. ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ವಿಚಾರವಾಗಿ ಗೆದ್ದ ಶಾಸಕರಿಗೆ ಮಾತ್ರ ಸಚಿವ ಸ್ಥಾನ ಎಂದು ಹೇಳಲಾಗುತ್ತಿದೆ ಎಂಬ ಶಾಸಕರಾದ ಸುಧಾಕರ್ ಮತ್ತು ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ವಿಶ್ವನಾಥ್, ಸುಧಾಕರ್ ಡಾಕ್ಟರ್, ನಾನು ಲಾಯರ್. ಸುಪ್ರೀಂಕೋರ್ಟ್ ತೀರ್ಪನ್ನು ನಾನು ಓದಿಕೊಂಡಿದ್ದೇನೆ. ನೀವು ಚುನಾವಣೆಗೆ ನಿಂತು ಪವಿತ್ರರಾಗಿ ಬನ್ನಿ ಎಂದು ಹೇಳಿದೆಯೇ ಹೊರತು ಸೋಲು-ಗೆಲುವಿನ ಬಗ್ಗೆ ಹೇಳಿಲ್ಲ. ಸುಧಾಕರ್ ಡಾಕ್ಟರ್ ಆಗಿದ್ದು, ವಕೀಲರ ಬಳಿ ಜಡ್ಜಮೆಂಟ್ ತರಿಸಿಕೊಂಡು ಓದಿ, ಅರ್ಥಮಾಡಿಕೊಳ್ಳಲಿ ಎಂದರು.
ಸಂಪುಟ ವಿಸ್ತರಣೆಯಲ್ಲಿ ನಾವು 17 ಜನರು ಯಾವುದೇ ಗೊಂದಲವನ್ನ ಸೃಷ್ಟಿ ಮಾಡಿಲ್ಲ. ಸಿಎಂ ಗೊಂದಲದಲ್ಲಿದ್ದಾರೆ ಎಂದು ತೋರಿಸುವ ಯತ್ನ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಸಹ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಈ 17 ಜನರಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ನಮ್ಮ ಈ ಹೋರಾಟಕ್ಕೆ ಗೌರವ ನೀಡಬೇಕು. ನಮ್ಮದು ಹೋರಾಟವೇ ಹೊರತು ಮಾರಾಟ ಅಲ್ಲ ಎಂದು ಗರಂ ಆದರು.
ನಮಗೆ 17 ಜನರಿಗೂ ಮಂತ್ರಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈಗ ಚುನಾವಣೆಯಲ್ಲಿ ಸೋತಿರಲಿ, ಗೆದ್ದಿರಲಿ ಅವರನ್ನ ಸಚಿವರನ್ನಾಗಿ ಮಾಡುವ ಬದ್ಧತೆ ಸರ್ಕಾರದ್ದಾಗಿದೆ. ಯಡಿಯೂರಪ್ಪ ಅವರು ಇದಕ್ಕೆ ಬದ್ಧರಾಗಿರುತ್ತಾರೆಂದು ಭಾವಿಸುತ್ತೇನೆ.
ಇನ್ನು ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಸಿಎಂ ಯಡಿಯೂರಪ್ಪನವರೇ ಹೇಳುತ್ತಿರುವುದು ಸರಿಯಲ್ಲ, ಬಿಜೆಪಿಯಲ್ಲಿ ಸೋತವರನ್ನು ಮಂತ್ರಿ ಮಾಡಿದ ಉದಾಹರಣೆ ಬೇಕಾದಷ್ಟಿದೆ. ಅರುಣ್ ಜೇಟ್ಲಿ ಸೋತಿದ್ದರು. ಅಷ್ಟೇ ಯಾಕೆ ಡಿಸಿಎಂ ಲಕ್ಷ್ಮಣ ಸವದಿ ಸೋತಿಲ್ಲವೇ? ಅವರನ್ನೆಲ್ಲಾ ಸಚಿವರನ್ನಾಗಿ ಮಾಡಿರುವಾಗ ನಮಗೂ ಸಚಿವ ಸ್ಥಾನ ನೀಡಿದಲ್ಲಿ ತಪ್ಪೇನು ಎಂದು ಪ್ರೆಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ