ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಿಎಂ ಬಿ ಎಸ್ ಯಡಿಯೂರಪ್ಪ ಬಳಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಇದಕ್ಕೆ ಅವರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಗೆ ನನ್ನನ್ನ ನಾಮ ನಿರ್ದೇಶನ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ ಎಂದರು. 40 ವರ್ಷಗಳಿಂದ ಈ ರಾಜಕಾರಣದ ಏರು-ಪೇರು, ಒಳ್ಳೆಯದ್ದು-ಕೆಟ್ಟದ್ದು ಎಲ್ಲವನ್ನೂ ನಾವು ಅನುಭವಿಸಿಕೊಂಡು ಬಂದಿದ್ದೇವೆ. ಹಾಗಾಗಿ ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಇಲ್ಲ ಎಂದು ಹೇಳಿದರು.
ನಾನೊಬ್ಬ ಬರಹಗಾರ, ನನ್ನ ಪುಸ್ತಕಗಳು ರಾಜಕೀಯಕ್ಕೆ ಸಂಬಂಧಪಟ್ಟಿವೆ. ಲಂಡನ್ ಪಾರ್ಲಿಮೆಂಟ್ ಬಗ್ಗೆ ಪುಸ್ತಕ ಬರೆದಿದ್ದೇನೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಲೋಕದಿಂದ ನನ್ನನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ. ಸಿಎಂ ಇದಕ್ಕೆ ಒಪ್ಪಿದ್ದು, ಆಗಬಹುದು ಎಂದು ಹೇಳಿದ್ದಾರೆ. ನನಗೂ ಕಾನೂನಿನ ಅರಿವಿದೆ. ಎಂಟಿಬಿ ನಾಗರಾಜ್ ಆಯ್ಕೆಗೆ ತೊಡಕಿಲ್ಲ ಅನ್ನೋದಾದರೆ ನನಗೆ ಏಕೆ ತೊಡಕಾಗುತ್ತೆ ಎಂದು ಪ್ರಶ್ನಿಸಿದರು.
ನಮ್ಮ ಅನರ್ಹತೆ ಇದ್ದದ್ದು ಕೇವಲ ಕೆಳ ಮನೆಗೆ ಮಾತ್ರ. ಮೇಲ್ಮನೆಗೆ ಆಯ್ಕೆಯಾಗೋಕೆ ಯಾವುದೇ ಕಾನೂನಿನ ಅಡೆ-ತಡೆ ಇಲ್ಲ. ಸಾಹಿತ್ಯ ಕ್ಷೇತ್ರದಿಂದ ನನ್ನನ್ನು ನಾಮ ನಿರ್ದೇಶನ ಮಾಡುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ