ಪ್ರಗತಿವಾಹಿನಿ ಸುದ್ದಿ, ಹೊನ್ನಾವರ – ಖ್ಯಾತ ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆ ನಿಧನರಾಗಿದ್ದಾರೆ, ಅವರಿಗೆ 67 ವರ್ಷ ವಯಸ್ಸಾಗಿತ್ತು.
ಯಕ್ಷಗಾನದಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದ ಹಡಿನಬಾಳು, 2019ರಲ್ಲಿ ಭೀಕರ ರಸ್ತೆ ಅಪಘಾತಕ್ಕೊಳಗಾಗಿ ಜರ್ಜರಿತರಾಗಿದ್ದರು. ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದರು.
1953 ರಲ್ಲಿ ಜನಿಸಿದ ಶ್ರೀಪಾದ ಹೆಗಡೆ ಎಸ್‍ಎಸ್‍ಎಲ್‍ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976, 77 ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ ವೇಳೆ ಯಕ್ಷಗಾನಕ್ಕೆ ಪ್ರವೇಶಿಸಿದ್ದರು. ಬಳಿಕ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ ಶಿರಸಿ, ಪೆರ್ಡೂರು, ಬಚ್ಚಗಾರು, ರಾಮನಾಥೇಶ್ವರ, ಮಂದಾರ್ತಿ, ಶಿರಸಿ ಮಾರಿಕಾಂಬ, ಸಾಲಿಗ್ರಾಮ, ಇಡಗುಂಜಿ, ನೀಲಾವರ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಂಡಾಕುಳಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ.
ಹಾಸ್ಯಪಾತ್ರಗಳಾದ ಬ್ರಾಹ್ಮಣ, ಬಾಗಿಲದೂತ, ವನಪಾಲ, ಅಜ್ಜಿ, ಮಂಥರೆ, ಕಪ್ಪದದೂತ, ಕಾಶಿಮಾಣಿ, ಸ್ತ್ರೀಪಾತ್ರದಲ್ಲಿ ಚಿತ್ರಾಂಗದೆ, ಅಂಬೆ, ಬಣ್ಣದ ವೇಷದಲ್ಲಿ ಘೋರ ಶೂರ್ಪನಖಿ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ