Latest

ಹಲಾಲ್ ವಿರುದ್ಧ ಜನ ಜಾಗೃತಿ ಅಭಿಯಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುಗಾದಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನಲ್ಲಿ ಬ್ರಹ್ಮಪೂಜೆ ಹಾಗೂ ಹಲಾಲ್ ವಿರುದ್ಧ ಜನ ಜಾಗೃತಿ ಅಭಿಯಾನ ಮಾಡಲಾಯಿತು.

ನೂರಾರು ಹಿಂದೂ ಬಾಂಧವರು ಬ್ರಹ್ಮಧ್ವಜ ಪೂಜೆಯ ಸಮಯದಲ್ಲಿ ಉಪಸ್ಥಿತರಿದ್ದು ಬ್ರಹ್ಮಧ್ವಜದ ಚೈತನ್ಯದ ಲಾಭ ಪಡೆದುಕೊಂಡರು ಮತ್ತು ಧರ್ಮಶಾಸ್ತ್ರದಂತೆ ಹಬ್ಬ ಆಚರಿಸಲು ನಿಶ್ಚಯಿಸಿದರು !

ಯುಗಾದಿಯ ದಿನ ಶನಿವಾರ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ನಿಮಿತ್ತ ಬ್ರಹ್ಮಧ್ವಜವನ್ನು ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಈ ಸಮಯದಲ್ಲಿ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದು ಬ್ರಹ್ಮ ಧ್ವಜದ ಚೈತನ್ಯದ ಲಾಭ ಪಡೆದುಕೊಂಡರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಭವ್ಯ ಗೌಡ ಇವರು ಮಾತನಾಡಿ ಕರ್ನಾಟಕ ಸರ್ಕಾರವು ಯುಗಾದಿಯ ದಿನದಂದು ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಯನ್ನು ಆಚರಿಸಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ಮುಂದೆ ಅವರು ಯುಗಾದಿಯನ್ನು ಆಚರಿಸುವ ಐತಿಹಾಸಿಕ, ನೈಸರ್ಗಿಕ ಹಾಗೂ ಆಧ್ಯಾತ್ಮಿಕ ಕಾರಣಗಳನ್ನು ತಿಳಿಸಿಕೊಟ್ಟರು. ಈ ದಿನ ಪ್ರಭು ಶ್ರೀರಾಮನು ವಾಲಿಯನ್ನು ವಧಿಸಿದ ಪುಣ್ಯ ದಿನವಾಗಿದೆ, ಯುಗಾದಿಯ ದಿನದಂದು ಪ್ರಕೃತಿಯಲ್ಲಿಯೂ ಬದಲಾವಣೆಗಳನ್ನು ನಾವು ಕಾಣಬಹುದು, ಆದರೆ ಕೆಲವರು ಇದರ ಅರಿವಿಲ್ಲದೆ ಡಿಸೆಂಬರ್ ೩೧ರ ಮಧ್ಯರಾತ್ರಿ ಹೊಸವರ್ಷವನ್ನು ಆಚರಿಸುವ ಮೂಲಕ ವಿಕೃತಿ ಮೆರೆಯುತ್ತಾರೆ, ಈ ರೀತಿ ಮಾಡದೆ ಯುಗಾದಿಯ ದಿನದಂದೇ ಹಿಂದೂ ಹೊಸವರ್ಷವನ್ನು ಆಚರಿಸೋಣ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಯುಗಾದಿಯಿಂದ ರಾಮನವಮಿ ಹಾಗೂ ಹನುಮಜಯಂತಿಯ ಕಾಲಾವಧಿಯಲ್ಲಿ ಶ್ರೀ ರಾಮ ಹಾಗೂ ಹನುಮನಾಮ ಸಂಕೀರ್ತನೆಯ ಅಭಿಯಾನವನ್ನು ಅಯೋಜಿಸಲಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಹಭಾಗಿಯಾಗಿ ಈ ನಾಮಸಂಕೀರ್ತನೆಯ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ’ಧಾರ್ಮಿಕ ಆಚರಣೆಯೊಂದಿಗೆ ನಮ್ಮ ಸಂಸ್ಕೃತಿ, ಧರ್ಮ ಹಾಗೂ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಸಹಭಾಗಿ ಆಗುವುದು ನಮ್ಮ ಕರ್ತವ್ಯವೇ ಆಗಿದೆ ಮತ್ತು ಇದು ಕೇವಲ ಹಿಂದೂ ರಾಷ್ಟ್ರ ಸ್ಥಾಪನೆಯಿಂದಲೇ ಸಾಧ್ಯವಾಗಲಿದೆ. ಹಾಗಾಗಿ ಯುಗಾದಿಯ ಈ ದಿನದಂದು ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಕಲ್ಪ ಮಾಡೋಣ’ ಎಂದರು.

ಇದೆ ವೇಳೆ ದೇವಸ್ಥಾನಕ್ಕೆ ಬಂದಿದ್ದ ಪ್ರತಿಯೊಬ್ಬ ಭಕ್ತಾದಿಗಳಿಗೆ ಬೇವು ಬೆಲ್ಲದ ಪ್ರಸಾದವನ್ನು ನೀಡಿ ಯುಗಾದಿಯ ಮರುದಿನದಂದು ಆಚರಿಸುವ ಹೊಸತೊಡಕುದಲ್ಲಿ ಹಲಾಲ್ ಪದಾರ್ಥಗಳನ್ನು ಬಹಿಷ್ಕರಿಸಿ ಸ್ವದೇಶಿ ಉತ್ಪನ್ನಗಳ ಖರೀದಿಸಬೇಕೆಂದು ಜಾಗೃತಿ ಮೂಡಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button