*ಹಂಪಿ ಕನ್ನಡ ವಿವಿ ವಿದ್ಯುತ್ ಬಿಲ್ ಮನ್ನಾ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಒತ್ತಾಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಡಿನ ಏಕೈಕ ಕನ್ನಡ ಭಾಷಾ ಸಂಶೋಧನಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯ ಹಂಪಿ ಕನ್ನಡ ವಿಶ್ವವಿದ್ಯಾಲಯವು ವಿಶೇಷ ಕಾನೂನಿನ ಅಡಿಯಲ್ಲಿ ಸ್ಥಾಪಿತವಾಗಿರುವ ಈ ವಿಶ್ವವಿದ್ಯಾನಿಯದ ಮಹತ್ವ ಅರಿತು ಅದನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡಿಗರ ಹೆಮ್ಮೆಯ ವಿಶ್ವವಿದ್ಯಾಲಯವನ್ನು ಸಾಯಿಸದೇ, ಉಳಿಸಿ ಅಭಿವೃದ್ಧಿಪಡಿಸಬೇಕಾಗಿದೆ. ವಿದ್ಯುತ್ ಬಿಲ್ ಪಾವತಿಗೂ ಹೆಣಗಾಡುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ೮೫ ಲಕ್ಷ ರೂ. ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಒತ್ತಾಯಿಸಿದ್ದಾರೆ.
ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಇಂಧನ ಸಚಿವ ಶ್ರೀ ಕೆ.ಜೆ. ಜಾರ್ಜ್ ಅವರಿಗೆ ಪತ್ರ ಬರೆದು, ಪ್ರಪಂಚದಲ್ಲಿ ಕನ್ನಡ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯವೆಂಬ ಹೆಮ್ಮೆಯೊಂದಿಗೆ ಹುಟ್ಟಿಕೊಂಡ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಬದುಕಿನ ವಿವೇಕದಂತೆ ಕೆಲಸ ಮಾಡುತ್ತಿದೆ. ಕರ್ನಾಟಕ ಸರಕಾರ ಕೊಡಮಾಡಿದ ಸುಮಾರು ಏಳುನೂರು ಎಕರೆಯಷ್ಟು ವಿಸ್ತಾರದಲ್ಲಿನ ವಿದ್ಯಾರಣ್ಯದಲ್ಲಿ ತ್ರಿಪದಿ, ಕೂಡಲಸಂಗಮ, ಕ್ರಿಯಾಶಕ್ತಿ, ಭುವನವಿಜಯ, ತುಂಗಭದ್ರಾ, ಅನನ್ಯ, ಅಸ್ಮಿತ, ಅಕ್ಷರ ಗ್ರಂಥಾಲಯದಂಥ ಭವ್ಯ ಕಟ್ಟಡಗಳನ್ನು ಹೊಂದಿದೆ. ಮರೆತು ಹೋಗಬಹುದಾಗಿದ್ದ ನಮ್ಮ ದೇಸಿ ಮಾರ್ಗದ ಹೆಸರುಗಳನ್ನು ಕಟ್ಟಡಗಳಿಗೆ ಇಟ್ಟು ಯುವಕರ ಭಾವಕೋಶದಲ್ಲಿ ಉಳಿಯುವಂತೆ ಮಾಡಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಭೌತಿಕವಾಗಿ ಭದ್ರ ಬುನಾದಿಯನ್ನು ಹಾಕಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಈ ವಿವಿಯ ಕುರಿತು “ಕನ್ನಡ ವಿಶ್ವವಿದ್ಯಾಲಯ ಕೇವಲ ವಿದ್ಯೆಯನ್ನು ನೀಡುವುದಕ್ಕೆ ಸೀಮಿತವಲ್ಲ ವಿದ್ಯೆಯನ್ನು ಸೃಷ್ಟಿಸುವ ಕೇಂದ್ರ”ವೆಂದು ಬಣ್ಣಿಸಿದ್ದಾರೆ. ವಿಶ್ವವಿದ್ಯಾಲಯದ ಆಶಯ ಸ್ವರೂಪವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿಯೇ ಬುನಾದಿ ಹಾಕಲಾಗಿದೆ. ಹಿಂದೆ ವಿದ್ಯಾನಗರವಾಗಿದ್ದ ಈ ಪ್ರದೇಶ ನಂತರ ಸಾಮಾಜ್ರ್ಯ ವಿಸ್ತಾರದಿಂದ ವಿಜಯನಗರವಾಗಿ ಈಗ ‘ವಿದ್ಯಾರಣ್ಯ’ವಾಗಿದೆ ಎಂಬ ಮಾತು ಚರಿತ್ರೆಯನ್ನು ನೆನಪಿಸುತ್ತದೆ.
ಕನ್ನಡಿಗರ ನೂರಾರು ಕನಸುಗಳನ್ನು ಸಾಕಾರಗೊಳಿಸಲೆಂದು ಹುಟ್ಟಿದ ವಿಶ್ವವಿದ್ಯಾಲಯ ಕನ್ನಡದ ಕೆಲಸವನ್ನು ಕಾಲ ಬಯಸಿದಂತೆ ಮಾಡುತ್ತ ಬಂದಿದೆ. ನಾಡಿನಲ್ಲಿ ಪ್ರತಿಷ್ಠಿತ ಪುರಸ್ಕಾರವಾಗಿರು ʻನಾಡೋಜʼ ವನ್ನು ನೀಡುವ ಮೂಲಕ ನಾಡಿನ ನೆಲ ಮೂಲ ಸಂಸ್ಕೃತಿಗಾಗಿ ದುಡಿದವರನ್ನು ಗುರುತಿಸುತ್ತ ಮುನ್ನಡೆಯುತ್ತಿದೆ. ಇಂಥಹ ಮಹತ್ವದ ಪರಂಪರೆಯನ್ನು ಹೊಂದಿರುವ ಹಂಪಿ ವಿಶ್ವವಿದ್ಯಾಲಯಕ್ಕೆ ಸರಕಾರ ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಸದ್ಯ ಮಾಧ್ಯಮಗಳಲ್ಲಿ ಬದಿರುವ ವರದಿಯ ಪ್ರಕಾರ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಬರೋಬ್ಬರಿ ೭೭ ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಹಿಂದಿನ ಬಾಕಿ ಮೊತ್ತವನ್ನು ಸೇರಿಸಿದಂತೆ ಇಲ್ಲಿವರೆಗಿನ ಒಟ್ಟು ವಿದ್ಯುತ್ ಬಿಲ್ ೮೫ ಲಕ್ಷ ರೂ.ಗಳಷ್ಟಾಗಿದ್ದು, ಸದ್ಯ ಹಂಪಿ ವಿಶ್ವವಿದ್ಯಾಲಯ ಸಂಕಷ್ಟಕ್ಕೆ ಸಿಲುಕಿದೆ. ೨೦೨೦ರಲ್ಲಿ, ಗುತ್ತಿಗೆ ಕಾರ್ಮಿಕರ ವೇತನ ಸೇರಿದಂತೆ ಇತರ ಖರ್ಚುಗಳನ್ನು ಸರಿದೂಗಿಸಲು ಸುಮಾರು ೮ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಅಂದಿನ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಕೇಳಿದ ಹೆಚ್ಚುವರಿ ಅನುದಾನ ಬಿಡುಗಡೆಯಾಗಿರಲಿಲ್ಲ. ಪರಿಣಾಮ ವಿಶ್ವವಿದ್ಯಾಲಯವು ಕೆಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ‘ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿಧಿಯನ್ನು ಕೇಳುವುದು ವಿವಿಯ ಸಾಂವಿಧಾನಿಕ ಹಕ್ಕು. ಅಂತೆಯೇ ವಿದ್ಯುತ್ ಬಿಲ್ ಮನ್ನಾ ಮಾಡುವುದು ಕೂಡ ಅದರ ಭಾಗವಾಗಿದೆ. ಆದ್ದರಿಂದ ಕನ್ನಡ ನಾಡಿನಲ್ಲಿ ಇರುವ ಕನ್ನಡಿಗರ ಹೆಮ್ಮೆಯ ಸರಕಾರ ಈ ಸಮಸ್ಯೆಯನ್ನು ಬಗೆಹರಿಸಲು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿದ್ಯುತ್ ಬಿಲ್‌ನ್ನು ಮನ್ನಾ ಮಾಡುವ ಮೂಲಕ ಸಹಾಯ ಮಾಡಬೇಕು ಎಂದು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಾಡೋಜ ಡಾ. ಮಹೇಶ ಜೋಶಿ ಅವರು ಆಗ್ರಹಿಸಿದ್ದಾರೆ.
ಹಂಪಿಯ ಕನ್ನಡ ವಿವಿಯ ಎಲ್ಲ ವಿಭಾಗಗಳು ಆಡಳಿತಾಂಗ ಸೇರಿ ನಾನಾ ಕಟ್ಟಡಗಳಲ್ಲಿ ಬಳಸುವ ಮಾಸಿಕ ಬಿಲ್ ೧೦ ಲಕ್ಷ ರೂ ಬರುತ್ತದೆ ನೂತನ ಕುಲಪತಿಗಳು ಬಂದ ಬಳಿಕ ಪ್ರತಿ ತಿಂಗಳು ೧೦ ಲಕ್ಷ ರೂ ಪಾವತಿಸಲಾಗುತ್ತಿದೆ ಆದರೂ ಒಂದು ವರ್ಷದಿಂದ ಅನುದಾನದ ಸಮಸ್ಯೆ ಕಾರಣ ಬಿಲ್ ಪಾವತಿಸಲಾಗದೇ ದೊಡ್ಡ ಮೊತ್ತದ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ವಿವಿಗೆ ಬರುವ ಅನುದಾನದಲ್ಲಿ ಅಲ್ಪಸ್ವಲ್ಪ ಬಾಕಿ ಪಾವತಿಸಿ ನಿರ್ವಹಣೆ ಮಾಡಲು ವಿವಿ ಆಡಳಿತ ಹೆಣಗಾಡುತ್ತಿದೆ. ಹೀಗಾಗಿ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ವಿವಿ ಆಡಳಿತಾಧಿಕಾರಿಗಳು ಸರಕಾರಕ್ಕೆ ಮನವಿ ಮಾಡಿರುವುದನ್ನು ಸರಕಾರ ಪರಿಗಣಿಸಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಪರಿಷತ್ತು ಆಗ್ರಹಿಸಿದೆ. ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯದ ಸಂಶೋಧನಾ ಕೆಲಸಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿರುವುದು ಒಂದೆಡೆಯಾದರೆ, ತಾತ್ಕಾಲಿಕ ಸಿಬ್ಬಂದಿ ವೇತನ, ಪುಸ್ತಕ ಪ್ರಕಟಣೆ,ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಸೇರಿದಂತೆ ಇತರ ಖರ್ಚು ವೆಚ್ಚ ಸರಿದೂಗಿಸುವುದು ಸಹ ಸವಾಲಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು ಮಾಧ್ಯಮದ ಮುಂದೆ ಹೇಳಿಕೊಂಡಿರುವುದು ಸಹ ವರದಿಯಾಗಿದೆ. ಆದ್ದರಿಂದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಧ್ವನಿಯಾಗಿ ಸರಕಾರದ ಬಳಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಅನುದಾನ ಬಿಡುಗಡೆ ಮಾಡುವ ಮೂಲಕ ಹಾಗೂ ಬಾಕಿ ಇರುವ ವಿದ್ಯುತ್ ಬಿಲ್ ಮನ್ನಾ ಮಾಡುವ ಮೂಲಕ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಸೇರಿದಂತೆ ಕನ್ನಡಿಗರ ಆತ್ಮವಿಶ್ವಾಸ ಹೆಚ್ಚಿಸುವುದಕ್ಕೆ ಕಾರಣಕರ್ತರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ