ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಹೇಮಾವತಿ ಸೋನೊಳಿ ಇವರಿಗೆ ಹಾಲಿ ಅಧ್ಯಕ್ಷೆ ಜ್ಯೋತಿ ಬದಾಮಿ ಅವರು ಅಧಿಕಾರ ವಹಿಸಿಕೊಟ್ಟರು.
ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಸಾಕಷ್ಟು ಸಾಹಿತ್ಯಿಕ ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಜಿಲ್ಲಾದ್ಯಂತ ಹೆಸರು ಪಸರಿಸಿದ್ದು, ಕುವೆಂಪು ಕುಪ್ಪಳ್ಳಿ ಹಾಗೂ ನಿಡಸೋಸಿಯ ಶ್ರೀ ಮಠದ ಸಾಹಿತ್ಯ ಚಿಂತನ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಗೊಂಡು ಜನಪ್ರಿಯತೆ ಗಳಿಸಿತು. ರಾಜ್ಯಾದ್ಯಂತ ಸಾಹಿತ್ಯ ದಿಗ್ಗಜರು ಲೇಖಕಿಯರ ಸಂಘದ ವೇದಿಕೆಗೆ ಶೋಭೆ ತಂದಿದ್ದಾರೆ ಎಂದು ಜ್ಯೋತಿ ಬದಾಮಿ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಉಡುಪಿಯ ಹಾಸ್ಯ ಉಪನ್ಯಾಸಕಿ ಸಂಧ್ಯಾ ಶೆಣೈ ಅತಿಥಿಗಳಾಗಿ ಭಾಗವಹಿಸಿ ಇಪ್ಪತ್ತು ವರ್ಷಗಳ ಗಟ್ಟಿ ಹೆಜ್ಜೆ ಗುರುತು ಮೂಡಿಸುತ್ತಾ ಹಿರಿಕಿರಿಯ ಸಾಹಿತಿಗಳಿಗೆ ವೇದಿಕೆ ಒದಗಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ವಾರಸುದಾರರಿಗೆ ಮಾರ್ಗದರ್ಶನ ಮಾಡುತ್ತಿರುವ ಲೇಖಕಿಯರ ಸಂಘ ಉತ್ತರೋತ್ತರ ವಾಗಿ ಬೆಳೆಯಲಿ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿ ಮಠ ಅವರು ಲೇಖಕಿಯರ ಸಂಘದ ಕಾರ್ಯಚಟುವಟಿಕೆಗಳು ಸಾಹಿತ್ಯಿಕ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸದಸ್ಯರು ೧೮ ಕೃತಿಗಳನ್ನು ಈ ಅವಧಿಯಲ್ಲಿ ಲೋಕಾರ್ಪಣೆ ಗೊಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಪ್ರವಾಹ ಸಂತ್ರಸ್ತರಿಗಾಗಿ 50 ಸಾವಿರ ಕ್ಕಿಂತ ಹೆಚ್ಚು ಹಣ ಸಹಾಯ ಮಾಡಿದ್ದಾರೆ, ಡಯಾಲಿಸಿಸ್ ರೋಗಿಗೆ ಹಣದ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ. ಜ್ಯೋತಿ ಬದಾಮಿ ಹಾಗು ಹೇಮಾ ಸೋನೋಳಿ ಯವರಿಗೆ ಶುಭ ಹಾರೈಸಿ ಸಂಘ ಶ್ರೇಯೋಭಿವೃದ್ಧಿಹೊಂದಲಿ ಎಂದು ಹಾರೈಸಿದರು.
ನೂತನ ಅಧ್ಯಕ್ಷೆ ಹೇಮಾ ಸೋನೋಳಿ ಮಾತನಾಡುತ್ತಾ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎಲ್ಲರ ಸಹಕಾರವಿರಲಿ ಎಂದರು.
ಕಾರ್ಯದರ್ಶಿ ಆಶಾ ಯಮಕನಮರಡಿ ವಾರ್ಷಿಕ ವರದಿ ಸಲ್ಲಿಸಿದರು. ಖಜಾಂಚಿ ರಾಜನಂದಾ ಘಾರ್ಗಿ ಹಣಕಾಸು ವಿವರ ತಿಳಿಸಿದರು. ಸುನಂದಾ ಮುಳೆ ಸ್ವಾಗತಿಸಿದರು. ಶೈಲಜಾ ಕುಲಕರ್ಣಿ ಪ್ರಾರ್ಥನೆ ನಡೆಸಿಕೊಟ್ಟರು. ಲಲಿತಾ ಕ್ಯಾಸಣ್ಣವರ ವಂದನಾರ್ಪಣೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ