*ಹನುಮ ಧ್ವಜ ವಿವಾದ: ಧ್ವಜಸ್ತಂಭ ಹತ್ತಿ ರಾಮನ ಫ್ಲೆಕ್ಸ್, ಬಾವುಟ ಕಟ್ಟಿದ ಮಹಿಳೆಯರು*

ಕೆರಗೋಡು ಗ್ರಾಮದಲ್ಲಿ ಮತ್ತೆ ಲಾಠಿ ಚಾರ್ಜ್
ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದದಿಂದ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದ್ದು, ಗ್ರಾಮಸ್ಥರನ್ನು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಮತ್ತೆ ಲಾಠಿ ಪ್ರಹಾರ ಮಾಡಿದ್ದಾರೆ.
ಕೆರಗೋಡು ಗ್ರಾಮದ ಕಟ್ಟಲಾಗಿದ್ದ ಬೃಹತ್ ಹನುಮಧ್ವಜವನ್ನು ಗ್ರಾಮಸ್ಥರ ವಿರೋಧದ ನಡುವೆಯೂ ಇಂದು ಜಿಲ್ಲಾಡಳಿತ ತೆರವುಗೊಳಿಸಿತ್ತು. ಬಳಿಕ ನಿಷೇಧಾಜ್ಞೆ ಜಾರಿ ಮಾಡಿತ್ತು. ಆದಾಗ್ಯೂ ನಿಯಮ ಉಲ್ಲಂಘಿಸಿ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರು ಧ್ವಜಸ್ತಂಭದತ್ತ ಆಗಮಿಸಿ ಬ್ಯಾರಿಕೇಡ್ ಗಳನ್ನು ತೆರವು ಮಾಡಿದ್ದರು. ಅಲ್ಲದೇ ಮಹಿಳೆಯರು ಏಣಿ ಮೂಲಕ ಧ್ವಜಸ್ತಂಭ ಹತ್ತಿ ಶ್ರೀರಾಮನ ಫ್ಲೆಕ್ಸ್ ಹಾಗೂ ಕೇಸರಿ ಬಾವುಟವನ್ನು ಕಟ್ಟಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು.
ಕೇಸರಿ ಬಾವುಟವನ್ನು ತೆರವುಗೊಳಿಸಲು ಬಂದ ಪೊಲೀಸರ ವಿರುದ್ಧ ಜನರು ವಾವಾದಕ್ಕಿಳಿದಿದ್ದರು. ಈ ವೇಳೆ ಪೊಲೀಸರು ಗ್ರಾಮಸ್ಥರನ್ನು ಚದುರಿಸಲು ಮತ್ತೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಇನ್ನಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ