*ಪಂಚಮಸಾಲಿ ಟ್ರಸ್ಟ್ ಹಾಗೂ ವಚನಾನಂದ ಶ್ರೀಗಳ ಬೆಂಬಲಿಗರ ನಡುವೆ ಘರ್ಷಣೆ: ಮಠದ ಆವರಣದಲ್ಲಿ ಹೈಡ್ರಾಮಾ*

ಪ್ರಗತಿವಾಹಿನಿ ಸುದ್ದಿ: ಹರಿಹರದ ಪಂಚಮಸಾಲಿ ಪೀಠದಲ್ಲಿ ಟ್ರಸ್ಟಿಗಳು ಹಾಗೂ ವಚನಾನಂದ ಶ್ರೀಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇಂದು ಮಠದ ಆವರಣದಲ್ಲಿ ಹೈಡ್ರಾಮಾ ನಡೆದಿದ್ದು, ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮಠದ ಅನುದಾನ ಮತ್ತು ಭಕ್ತರ ದೇಣಿಗೆಯ ಲೆಕ್ಕಾಚಾರದ ವಿಚಾರದಲ್ಲಿ ವಚನಾನಂದ ಸ್ವಾಮೀಜಿ ಮತ್ತು ಟ್ರಸ್ಟಿಗಳ ನಡುವೆ ತೀವ್ರ ಕಿತ್ತಾಟ ನಡೆಯುತ್ತಿದ್ದು, ವಚನಾನಂದ ಶ್ರೀಗಳನ್ನು ಟ್ರಸ್ಟಿಗಳು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಿದ್ದರು. ಇಂದು ಭಕ್ತರ ಸಮೂಹ ವಚನಾನಮ್ದ ಶ್ರೀಗಳನ್ನು ಮತ್ತೆ ಪೀಠದಲ್ಲಿ ಕೂರಿಸಿದೆ. ಇದೇ ವೇಳೆ ಮತ್ತೊಂದೆಡೆ ಮಠದಲ್ಲಿ ಲೆಕ್ಕಪತ್ರ ಸಭೆ ನಡೆಯುತ್ತಿದೆ.
ಮಠದ ಆಡಳಿತ ಮಂಡಳಿಯು ಭಕ್ತರ ದೇಣಿಗೆ ಮತ್ತು ಸರ್ಕಾರದ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆಸಿದೆ ಎಂದು ವಚನಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯವಾಗಿ, ರಾಜ್ಯ ಸರ್ಕಾರದಿಂದ ವಸತಿಗೃಹ, ಹಾಸ್ಟೆಲ್ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಬಂದಿದ್ದ 10 ಕೋಟಿ ರೂಪಾಯಿ ಅನುದಾನದಲ್ಲಿ ಗೋಲ್‌ಮಾಲ್ ನಡೆದಿದೆ ಎಂಬುದು ಶ್ರೀಗಳ ವಾದ. 2021ರಲ್ಲಿ ಟ್ರಸ್ಟಿಗಳು ಮತ್ತು ಆಡಳಿತಾಧಿಕಾರಿಗಳು ನಕಲಿ ಸಹಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ, ಆದರೆ ಕಟ್ಟಡಗಳೇ ನಿರ್ಮಾಣವಾಗಿಲ್ಲ ಎಂದು ಭಕ್ತರು ದೂರಿದ್ದಾರೆ.
ಶ್ರೀಗಳ ಆರೋಪಕ್ಕೆ ಪ್ರತಿಯಾಗಿ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು 2008ರಿಂದ 2026ರವರೆಗಿನ ಸಂಪೂರ್ಣ ಲೆಕ್ಕಪತ್ರಗಳ ಬ್ಯಾಗ್ ಹಿಡಿದು ಮಠಕ್ಕೆ ಆಗಮಿಸಿದ್ದಾರೆ. ನಾವು ಪಾರದರ್ಶಕವಾಗಿದ್ದೇವೆ, ಶ್ರೀಗಳು ತಮ್ಮ ಉಚ್ಚಾಟನೆಯ ವಿಷಯವನ್ನು ದಾರಿ ತಪ್ಪಿಸಲು ಲೆಕ್ಕದ ನಾಟಕವಾಡುತ್ತಿದ್ದಾರೆ. ಈಗ ಲೆಕ್ಕ ನೀಡಿದ್ದೇವೆ, ಶ್ರೀಗಳು ಕೂಡಲೇ ಮಠವನ್ನು ಬಿಟ್ಟು ಹೋಗಲಿ ಎಂದು ಗುಡುಗಿದ್ದಾರೆ.
ಟ್ರಸ್ಟ್ ಸದಸ್ಯರು ಲೆಕ್ಕ ನೀಡಲು ಆಗಮಿಸುತ್ತಿದ್ದಂತೆಯೇ ವಚನಾನಂದ ಶ್ರೀಗಳ ಬೆಂಬಲಿಗರು ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. ಉಭಯ ಗುಂಪುಗಳು ಮುಖಾಮುಖಿಯಾಗಿದ್ದರಿಂದ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಹಬದಿಗೆ ತಂದಿದ್ದಾರೆ. ಇದೇ ವೇಳೆ ವಚನಾನಂದ ಶ್ರೀಗಳು ನಾನು ಮಠವನ್ನು ಬಿಟ್ಟು ಹೋಗುವುದಿಲ್ಲ, ಇಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.


