*ಬಾಲಿವುಡ್‌ಗೆ ಬೆದರಿಕೆ ಹಾಕುತ್ತಿದ್ದ ಗ್ಯಾಂಗ್‌ಸ್ಟರ್ ವಶಕ್ಕೆ*: *ಭಾರತಕ್ಕೆ ಕರೆತರಲು ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯನೆಂದು ಗುರುತಿಸಿಕೊಂಡಿರುವ ಗ್ಯಾಂಗ್‌ಸ್ಟರ್ ಹ್ಯಾರಿ ಬಾಕ್ಸರ್‌ನನ್ನು ಅಮೆರಿಕದ ಅಧಿಕಾರಿಗಳು ಕ್ಯಾಲಿಫೋರ್ನಿಯಾದಲ್ಲಿ ವಶಕ್ಕೆ ಪಡೆದಿದ್ದಾರೆ. ಸುಲಿಗೆ, ಕೊಲೆ ಮತ್ತು ಬಾಲಿವುಡ್‌ನ ಗಣ್ಯರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಈತನ ಬಂಧನಕ್ಕಾಗಿ ಭಾರತೀಯ ತನಿಖಾ ಸಂಸ್ಥೆಗಳು ನೀಡಿದ್ದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆದಿದೆ.
ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ಮತ್ತು ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ ನೀಡಿದ ಮಾಹಿತಿಯ ಮೇರೆಗೆ ನವೆಂಬರ್ 6ರ ರಾತ್ರಿ ಅಮೆರಿಕದ ಅಧಿಕಾರಿಗಳು ಹ್ಯಾರಿ ಬಾಕ್ಸರ್‌ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಆತನನ್ನು ಕಾನೂನು ಪ್ರಕ್ರಿಯೆ ಮೂಲಕ ಭಾರತಕ್ಕೆ ಕರೆತರಲು ಸಿದ್ಧತೆ ನಡೆಯುತ್ತಿದೆ.
ಯಾರೀ ಹ್ಯಾರಿ ಬಾಕ್ಸರ್?
ಹ್ಯಾರಿ ಬಾಕ್ಸರ್‌ನ ನಿಜವಾದ ಹೆಸರು ಹರಿಚಂದ್ ಜಾಟ್. ರಾಜಸ್ಥಾನದ ಕೋಟ್‌ಪುಟ್ಲಿ-ಬೆಹ್ರೋಡ್ ಜಿಲ್ಲೆಯ ಬಾಮ್‌ಸುರ್ ಪ್ರದೇಶದ ನಿವಾಸಿ. ಜೈಪುರದಲ್ಲಿ ನೆಲೆಸಿದ್ದಾಗ ಬಾಕ್ಸಿಂಗ್ ಕಲಿತಿದ್ದರಿಂದ ಹ್ಯಾರಿ ಬಾಕ್ಸರ್ ಎಂಬ ಹೆಸರು ಬಂದಿತ್ತು. ಬಾಕ್ಸಿಂಗ್ ತರಬೇತುದಾರನಾಗಿ ಕೆಲಸ ಮಾಡಿದ್ದ ಈತ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.
ವಿದೇಶಕ್ಕೆ ತೆರಳಿದ ಬಳಿಕ ಅಲ್ಲಿಂದಲೇ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದ ಎಂಬುದು ಪೊಲೀಸರ ಶಂಕೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಎನ್ನಲಾಗಿದ್ದು, ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಹಲವು ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿದೆ.
ಅಮೆರಿಕದಲ್ಲಿ ಕುಳಿತುಕೊಂಡೇ ಬಾಲಿವುಡ್‌ನ ಹಲವು ಗಣ್ಯರಿಗೆ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು ಮತ್ತು ಆಡಿಯೊ ಸಂದೇಶಗಳ ಮೂಲಕ ಬೆದರಿಕೆ ಹಾಕುತ್ತಿದ್ದ ಆರೋಪ ಹ್ಯಾರಿ ಬಾಕ್ಸರ್ ಮೇಲಿದೆ. ಸುಲಿಗೆಗಾಗಿ ಬೆದರಿಕೆ ಹಾಕಿದ ಪ್ರಕರಣಗಳಲ್ಲೂ ಈತನ ಹೆಸರು ಕೇಳಿಬಂದಿದೆ.
ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಹೊರಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲೂ ಹ್ಯಾರಿ ಬಾಕ್ಸರ್ ಹೆಸರು ಕೇಳಿಬಂದಿತ್ತು. ದಾಳಿಯ ಹೊಣೆಯನ್ನು ಆತ ಹೊತ್ತುಕೊಂಡಿದ್ದ ಎಂದು ವರದಿಯಾಗಿತ್ತು. ಆದರೆ ಈ ಪ್ರಕರಣದಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆದಿತ್ತು.
ಒಂದು ಆಡಿಯೊ ಸಂದೇಶದಲ್ಲಿ ತನ್ನನ್ನು ಅರ್ಜು ಬಿಷ್ಣೋಯ್ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಹ್ಯಾರಿ ಬಾಕ್ಸರ್ ಮತ್ತು ಶುಭಂ ಲೋಂಕರ್ ಹೆಸರುಗಳನ್ನು ಉಲ್ಲೇಖಿಸಿ ದಾಳಿಯ ಹೊಣೆ ಹೊತ್ತಿದ್ದ. ಈ ಸಂದೇಶದ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಹ್ಯಾರಿ ಬಾಕ್ಸರ್‌ನನ್ನು ವಶಕ್ಕೆ ಪಡೆಯುವ ಕೆಲವೇ ದಿನಗಳ ಮೊದಲು ಗ್ಯಾಂಗ್‌ಸ್ಟರ್‌ಗಳಾದ ಹಿಮಾಂಶು ಭಾವು ಮತ್ತು ನೀರಜ್ ಫರೀದ್‌ಪುರಿಯಾ ಅವರನ್ನೂ ಅಮೆರಿಕದಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇದೀಗ ಹ್ಯಾರಿ ಬಾಕ್ಸರ್‌ನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಮೇಲೆ ತನಿಖಾ ಸಂಸ್ಥೆಗಳ ಗಮನವಿದೆ. ಆತನ ವಿಚಾರಣೆಯಿಂದ ಬಿಷ್ಣೋಯ್ ಗ್ಯಾಂಗ್‌ನ ವಿದೇಶಿ ಸಂಪರ್ಕಗಳು ಮತ್ತು ಅಪರಾಧ ಜಾಲದ ಕುರಿತು ಮತ್ತಷ್ಟು ಮಾಹಿತಿ ಹೊರಬರುವ ನಿರೀಕ್ಷೆಯಿದೆ.




