ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇನ್ನೂ 6 ತಿಂಗಳ ಕಾಲ ಕೊರೊನಾ ಸೋಂಕಿತರ ಸೇವೆ ಮಾಡಲು, ಕಾರ್ಯನಿರ್ವಹಿಸಲು ಮಾನಸಿಕವಾಗಿ ಸಿದ್ಧರಾಗಿ ಎಂದು ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಸಚಿವ ಆರ್ ಅಶೋಕ್ ಕರೆ ನೀಡಿರುವ ಬೆನ್ನಲ್ಲೇ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ವೈದ್ಯರು ಕೆಲಸಕ್ಕೆ ಹಾಜರಾಗಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಜುಲೈ 8ರಿಂದ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾಗಿ ಸ್ವತ: ಗುತ್ತಿಗೆ ಆಧಾರಿತ ವೈದ್ಯರು ತಿಳಿಸಿದ್ದಾರೆ. ಹಾಸನದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗುತ್ತಿಗೆ ಆಧಾರಿತ ವೈದ್ಯರು, ನಾವು ರಾಜ್ಯಾದ್ಯಂತ 507 ಜನ ವೈದ್ಯರು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಕೂಡ ಇಲ್ಲದೇ ನಿರಂತರವಾಗಿ ನಾವು ಪ್ರಾಣದ ಹಂಗು ತೊರೆದು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡಿದ್ದೇವೆ. ನಮ್ಮ ಕೆಲಸ ಖಾಯಂಗೊಳಿಸಿ ಎಂದು ನಾವು ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾರೂ ಕೂಡ ನಮ್ಮ ಮನವಿಗೆ ಸ್ಪಂಧಿಸಿಲ್ಲ. ಹೀಗಾಗಿ ಜುಲೈ 8ರಿಂದ ನಾವು ಕೆಲಸಕ್ಕೆ ಹಾಜರಾಗಲ್ಲ ಎಂದು ಸರ್ಕಾರಕ್ಕೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಗಿರೀಶ್ ಅವರನ್ನು ಭೇಟಿ ಮಾಡಿರುವ ಗುತ್ತಿಗೆ ಆಧಾರಿತ ವೈದ್ಯರು ತಮ್ಮ ಮನವಿ ಪತ್ರ ಸಲ್ಲಿಸಿದ್ದಾರೆ. ಕೊರೊನಾ ಸಂಕಷ್ಟದಿಂದ ಜನರು ವೈದ್ಯರಿಲ್ಲದೇ ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ