ಪ್ರಗತಿವಾಹಿನಿ ಸುದ್ದಿ; ಹಾಸನ: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಜನತೆ ಪ್ಯಾನಿಕ್ ಆಗುತ್ತಿದ್ದು, ಹೋಂ ಕ್ವಾರಂಟಿನ್ ನಲ್ಲಿದ್ದ ವ್ಯಕ್ತಿಯೊಬ್ಬ ಗಾಬರಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ದೇಶಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರು ಮನೆಯಿಂದ ಹೊರಬರದಂತೆ ಆದೇಶಿಸಿ ಲಾಕ್ ಡೌನ್ ಘೋಷಿಸಲಾಗಿದೆ. ಗಾಬರಿ, ಆತಂಕಕ್ಕೀಡಾಗಿರುವ ಜನರು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಇನ್ನು ಹೊರ ರಾಜ್ಯ ಮತ್ತು ವಿದೇಶಗಳಿಂದ ಬರುವ ವ್ಯಕ್ತಿಗಳನ್ನು 14 ದಿನಗಳ ಕಾಲ ಹೋಂ ಕ್ವಾರಂಟೀನ್ ನಲ್ಲಿ ಇಡಲಾಗಿದೆ. ಆ ವೇಳೆ ಕೊರೋನಾ ವೈರಸ್ ಇರುವುದು ಖಚಿತವಾದರೆ ಅಂತಹವರನ್ನು ಐಸೋಲೇಷನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ಸಂದಿಗ್ಧ ಸ್ಥಿತಿಗೆ ಸಿಲುಕಿರುವ ಜನರು ತೀವ್ರ ಆತಂಕಕ್ಕೀಡಾಗಿ ತಮಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಭಯಗೊಳ್ಳುತ್ತಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಂಚೇನಹಳ್ಳಿಯಲ್ಲಿ ಈ ದುರಂತ ನಡೆದಿದೆ. ವಿಷಕಂಠ (55) ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ಹೋಂ ಕ್ವಾರಂಟೈನ್ನಲ್ಲಿದ್ದರಿಂದ ತನಗೆ ಕೊರೋನಾ ಬಂದಿದೆಯೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ವಿಷಕಂಠ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಯುಗಾದಿ ಹಬ್ಬಕ್ಕೆಂದು ಮುಂಬೈನಿಂದ ತನ್ನ ಹುಟ್ಟೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸಿದ್ದರಿಂದ ಆತನ ಮುಂಗೈ ಮೇಲೆ ಹೋಂ ಕ್ವಾರಂಟೈನ್ ಎಂದು ಸೀಲ್ ಹಾಕಲಾಗಿತ್ತು. ಜೊತೆಗೆ ಮನೆಯಲ್ಲೇ ಇರುವಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಆತ ತನಗೆ ಕೊರೋನಾ ಸೋಂಕು ತಗುಲಿರಬಹುದು ಎಂಬ ಭಯಕ್ಕೆ ನೇಣಿಗೆ ಶರಣಾಗಿದ್ದಾನೆ. ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ