
ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನಾಡಿನ ಜನತೆಗೆ ಕೊಟ್ಟಿದ್ದೇವೆ; ಸಿಎಂ ಸಿದ್ದರಾಮಯ್ಯ
ಪ್ರಗತಿವಾಹಿನಿ ಸುದ್ದಿ; ಹಾಸನ: ಸಂಘಟನೆ ಬಲಿಷ್ಠವಾಗಿದ್ದರೆ ಮಾತ್ರ ಹಿಂದುಳಿದ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ವಿದ್ಯಾರ್ಥಿನಿಲಯ ಮತ್ತು ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ವರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. ಈ ಆಶಯಕ್ಕೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಜನರ ಕೊಳ್ಳುವ ಶಕ್ತಿ ಹೆಚ್ಚಾದರೆ ಆರ್ಥಿಕತೆ-ಜಿಡಿಪಿ ಬೆಳವಣಿಗೆ ಆಗುತ್ತದೆ. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ನಾಡಿನ ಜನತೆಗೆ ಕೊಟ್ಟಿದ್ದೇವೆ ಎಂದರು.
ಸಾಮಾಜಿಕ, ಆರ್ಥಿಕ ಅಸಮಾನತೆ ತೊಡೆದು ಹಾಕಿದಾಗ ಮಾತ್ರ ವರ್ಗರಹಿತ, ಜಾತಿ ರಹಿತ ಸಮಾಜ ನಿರ್ಮಾಣ ಸಾಧ್ಯ. ಕಾಂಗ್ರೆಸ್ ಸರ್ಕಾರ ಸಮಾಜದ ಅಸಮಾನತೆ ಅಳಿಸಿ ಎಲ್ಲ ವರ್ಗದವರೂ ಮುಖ್ಯವಾಹಿನಿಗೆ ಬರುವ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ನಾನು ಮುಖ್ಯಮಂತ್ರಿಯಾದಿ ದಲಿತರು, ಹಿಂದುಳಿದ ವರ್ಗದವರು ಮತ್ತು ಎಲ್ಲಾ ಜಾತಿಯ ಬಡವರಿಗೂ ಶಕ್ತಿ ತುಂಬುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ನೀಡಿದ್ದೇವೆ ಎಂದರು.
ಒಂದು ಕೋಟಿ ವರೆಗಿನ ಕಾಮಗಾರಿಗಳಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡುವ ಕಾರ್ಯಕ್ರಮವನ್ನು ಬಜೆಟ್ ನಲ್ಲಿ ಘೋಷಿಸಿದ್ದೇವೆ. ಜತೆಗೆ ಐದು ಗ್ಯಾರಂಟಿ ಯೋಜನೆಗಳು ಮಹಿಳೆಯರು ಮತ್ತು ಅಶಕ್ತರಿಗೆ ಆರ್ಥಿಕ ಶಕ್ತಿ ತುಂಬುತ್ತಿದೆ. ಇದರಿಂದ ರಾಜ್ಯದ ಆರ್ಥಿಕತೆಯೂ ಬೆಳವಣಿಗೆಯಾಗುತ್ತಿದೆ ಎಂದರು.
ಹಾಸನದ ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ ಅನುದಾನ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ, ಶಾಸಕರಾದ ಶಿವಲಿಂಗೇಗೌಡರು, ಸ್ವರೂಪ್ ಪ್ರಕಾಶ್, ಮಾಜಿ ಸಚಿವರಾದ ಬಿ.ಶಿವರಾಂ, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಪುಟ್ಟಸ್ವಾಮಿ ಶೆಟ್ಟರು, ಉಪಾಧ್ಯಕ್ಷರಾದ ಲಕ್ಷ್ಮಣ್ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ