*ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ*

ಪ್ರಗತಿವಾಹಿನಿ ಸುದ್ದಿ; ಹಾಸನ: ಶಾಲಾ ಶಿಕ್ಷಕಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಣ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ.
ಅರ್ಪಿತಾ ಅಪಹರಣಕ್ಕೊಳಗಾದ ಶಿಕ್ಷಕಿ. ಇಂದು ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿ ಅರ್ಪಿತಾ ಅವರನ್ನು ದುಷ್ಕರ್ಮಿಗಳ ಗುಂಪು ಇನ್ನೊವಾ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಹೊತ್ತೊಯ್ದಿದೆ.
ಶಿಕ್ಷಕಿ ನಡೆದು ಬರುವುದನ್ನೇ ಕಾದು ನಿಂತಿದ್ದ ದುಷ್ಕರ್ಮಿಗಳು ಆಕೆ ರಸ್ತೆಯಲ್ಲಿ ಬರುತ್ತಿರುವುದನ್ನು ಗಮನಿಸಿ ಏಕಾಏಕಿ ದಾಳಿ ಮಾಡಿ ಶಿಕ್ಷಕಿಯನ್ನು ಹಿಡಿದಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗ್ರೇ ಬಣ್ಣದ ಇನ್ನೋವಾ ಕಾರಿನಲ್ಲಿ ಶಿಕ್ಷಕಿಯನ್ನು ಹೊತ್ತೊಯ್ದಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಮಗಳನ್ನು ಕಿಡ್ನ್ಯಾಪ್ ಮಡಲಾಗಿದೆ. ರಾಮು ಎಂಬಾತನೇ ಈ ಕೃತ್ಯವೆಸಗಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅರ್ಪಿತಾ ಪೋಷಕರು ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
15 ದಿನಗಳ ಹಿಂದೆ ರಾಮು ಎಂಬಾತ ಮನೆಗೆ ಬಂದು ಅರ್ಪಿತಾಳನ್ನು ಮದುವೆ ಮಾಡಿಕೊಡುವಂತೆ ಕೇಳಿದ್ದ. ಆದರೆ ಪೋಷಕರು ಹಾಗೂ ಅರ್ಪಿತಾ ಮದುವೆಗೆ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಆಕೆಯನ್ನು ಅಪಹರಿಸಿದ್ದಾನೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಅಪಹರಣದ ಬಳಿಕ ಅರ್ಪಿತಾ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಸಿಸಿಟಿವಿ ಪರಿಶೀಲಿಸಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ