Latest

ಗೃಹ ಸಚಿವ ಅರಗ ಜ್ಞಾನೇಂದ್ರರಿಂದ ದ್ವೇಷದ ರಾಜಕೀಯ: ಡಿಕೆಶಿ ಆರೋಪ

ಪ್ರಗತಿವಾಹಿನಿ ಸುದ್ದಿ, ತೀರ್ಥಹಳ್ಳಿ: “ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕಾರ್ಯಕರ್ತರ ಮೇಲೆ ಕೇಸು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಬುಧವಾರ ಮಾತನಾಡಿದ ಅವರು, ಪಿಎಸ್ಐ ನೇಮಕಾತಿಯಲ್ಲಿ ಒಎಂಆರ್ ಶೀಟ್ ತಿದ್ದಿ ಅಕ್ರಮ ಮಾಡಲಾಗಿದೆ. ಸದನದಲ್ಲಿ ಅಕ್ರಮವೇ ನಡೆದಿಲ್ಲ ಎಂದು ಸುಳ್ಳು ಹೇಳಿದರು. ತಪ್ಪು ನಡೆದಿಲ್ಲವಾದರೆ ಐಪಿಎಸ್ ಸೇರಿದಂತೆ ನೂರಕ್ಕೂ ಹೆಚ್ಚು ಜನ ಜೈಲು ಸೇರಿದ್ದು ಯಾಕೆ?” ಎಂದು ಪ್ರಶ್ನಿಸಿದರು.

“ಬಿಜೆಪಿ ಸರಕಾರ ಯುವಕರ ಭವಿಷ್ಯದ ಜತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಹಾಕುವುದರ ಜತೆಗೆ ಇದಕ್ಕೆ ಕಾರಣರಾದ ಮಂತ್ರಿಗಳನ್ನು ಒಳಗೆ ಹಾಕಬೇಕು. ಈ ಸರ್ಕಾರದ ಅವಧಿ ಇನ್ನು 60 ದಿನ ಮಾತ್ರ. ನಂತರ ಜನ ಬಿಜೆಪಿಯವರಿಗೆ ಗಂಟೂಮೂಟೆ ಕಟ್ಟಿ ಮನೆಗೆ ಕಳಿಸಲಿದ್ದಾರೆ” ಎಂದರು.

“ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಚುನಾವಣೆಗೂ ಮುನ್ನ 600 ಭರವಸೆ ನೀಡಿದ್ದರು. 550 ಭರವಸೆ ಈಡೇರಿಸಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ 165 ಭರವಸೆ ನೀಡಿ 159 ಭರವಸೆ ಈಡೇರಿಸಿದ್ದೇವೆ. ಪ್ರತಿನಿತ್ಯ ಅವರ ಭರವಸೆ ಬಗ್ಗೆ ನಾವು ಪ್ರಶ್ನೆ ಕೇಳುತ್ತಿದ್ದರೂ ಯಾವುದೇ ಉತ್ತರ ಸಿಗುತ್ತಿಲ್ಲ” ಎಂದು ಡಿಕೆಶಿ ಹೇಳಿದರು.

ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ? ಜನ ಇವರನ್ನು ಮನೆಗೆ ಕಳಿಸುವ ಸಂಕಲ್ಪ ಮಾಡಿದ್ದಾರೆ ಎಂದು ಲೇವಡಿ ಮಾಡಿದ ಅವರು, ಶಿವಮೊಗ್ಗ ಅಭಿವೃದ್ಧಿ ಆಗಿದೆ ಎಂದು ಹೇಳುತ್ತಾರೆ. ಅಭಿವೃದ್ಧಿ ಆಗಿದ್ದರೆ, ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ 10 ಲಕ್ಷ ಕೋಟಿ ಬಂದಿದೆ. ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಂಡವಾಳವೇ ಬಂದಿಲ್ಲ. ಈ ಬಂಡವಾಳ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಈ ಸರ್ಕಾರ ಮಲೆನಾಡು ಕರಾವಳಿ ಭಾಗದಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಸೃಷ್ಟಿಸಿ ರಾಜಕಾರಣ ಮಾಡುತ್ತಿದೆ. ಪೊಲೀಸರು ತಮ್ಮ ಸಮವಸ್ತ್ರ ತೆಗೆದು ಬೇರೆ ಬಟ್ಟೆ ಹಾಕಿಕೊಂಡು ಆಯುಧ ಪೂಜೆ ಮಾಡುತ್ತಾರೆ. ಜ್ಞಾನೇಂದ್ರ ಅವರೇ ನಿಮ್ಮ ಕಾಲದಲ್ಲಿ ಏನೆಲ್ಲಾ ಆಗುತ್ತಿದೆ?” ಎಂದು ಪ್ರಶ್ನಿಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷ ಕರಾವಳಿ, ಮಲೆನಾಡು ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ನೀಡಲು ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗಾಗಲೇ ವಿಶೇಷ ಯೋಜನೆ ಘೋಷಣೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಾರ್ಯಕ್ರಮ ಘೋಷಿಸಿದ್ದೇವೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ವಿ.ಎಸ್. ಉಗ್ರಪ್ಪ, ಎನ್.ಎ. ಹ್ಯಾರಿಸ್, ಕೆ.ಎಚ್. ಮುನಿಯಪ್ಪ ಮತ್ತಿತರ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತಿ ಉಪ ಚುನಾವಣೆ: ಅಧಿಸೂಚನೆ ಪ್ರಕಟ

https://pragati.taskdun.com/gram-panchayat-bye-election-notification-published/

ಗುರುವಾರ ಬ್ರಾಹ್ಮಣ ಸಮಾಜದವರ ಪ್ರತಿಭಟನೆ

https://pragati.taskdun.com/protest-by-brahman-samaj-condemning-h-d-kumarswamys-statement-against-brahmins/

ನಾವಗೆ ಸ್ಮಶಾನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

https://pragati.taskdun.com/basavaraj-bommaireactionh-d-kumaraswamy-statment/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button