Kannada NewsKarnataka NewsPolitics

ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಹೆಚ್.ಡಿ‌.ಕುಮಾರಸ್ವಾಮಿ ಪ್ರತಿಕ್ರಿಯೆ

||||

||ಸಿಎಂ, ಡಿಸಿಎಂಗೆ ಗೊತ್ತಿದ್ದೇ ಹಗರಣ ನಡೆದಿದೆ; ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ; ಮಾಜಿ ಸಿಎಂ ನೇರ ಆರೋಪ||

||ಸಚಿವರಿಗೆ ರಾಜೀನಾಮೆ ಕೊಡಿ ಎನ್ನುವ ಧೈರ್ಯವೇ ಇವರಿಗೆ ಇರಲಿಲ್ಲ||

ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು; ಹೆಚ್ಡಿಕೆ ಸಂತಸ

ತಂತ್ರ, ಕುತಂತ್ರ ನಡೆಸಿ ಚುನಾವಣೆಯಲ್ಲಿ ಗೆಲುವು ಪಡೆದಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಕರ್ಮಕಾಂಡವು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಗೊತ್ತಿದ್ದೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ‌.ಕುಮಾರಸ್ವಾಮಿ ಅವರು ದೂರಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳು ಸಚಿವ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ಈಗಾಗಲೇ ಪ್ರಕರಣದಲ್ಲಿ ಸುಮಾರು ₹80 ರಿಂದ‌ ₹85 ಕೋಟಿ‌ ರವಾನೆ ಆಗಿರುವ ಮಾಹಿತಿ ಇದೆ. ರಾಜೀನಾಮೆ ನಿರ್ಧಾರ ಮೊದಲೇ ಆಗಬೇಕಿತ್ತು. ಇಷ್ಟೆಲ್ಲಾ ಕೇವಲ ಒಬ್ಬ ಮಂತ್ರಿಯಿಂದ ಆಗಿರುವುದಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸೇರಿಯೇ ಮಾಡಿರುವುದು ಎಂದರು ಕುಮಾರಸ್ವಾಮಿ ಅವರು.

ರಾಜೀನಾಮೆ ಸಂಬಂಧ ಸಿಎಂ, ಡಿಸಿಎಂ ಹೇಳಿಕೆಗಳನ್ನು ನಾನು ಗಮನಿಸಿದೆ. ರಾಜೀನಾಮೆ ನೀಡುವುದಕ್ಕೆ ಸಚಿವರಿಗೆ ನಾನು ಹೇಳಿಲ್ಲ, ನಾನು ಹೇಳಿಲ್ಲ ಎನ್ನುತ್ತಿದ್ದರು. ಇದು ಬರೀ ಡ್ರಾಮಾ ಅಷ್ಟೇ. ಆ ಮಂತ್ರಿಗೆ ರಾಜೀನಾಮೆ ನೀಡಿ ಅನ್ನುವ ಧೈರ್ಯ ಇವರಿಗೆ ಇರಲಿಲ್ಲ. ಅದಕ್ಕೆ ಕಾರಣ, ಹಗರಣದಲ್ಲಿ ದೊಡ್ಡ ಮಟ್ಟದ ಕೈಗಳಿವೆ. ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಈ ಹಗರಣ ನಡೆದಿದೆ. ಅದನ್ನು ಇವರೆಲ್ಲರೂ ಸೇರಿ ಮುಚ್ಚಿಟ್ಟಿದ್ದಾರೆ! ಯಾಕೆ? ಆ ಅಧಿಕಾರಿ ಸಾವಿನಿಂದ, ಮಾಧ್ಯಮಗಳ ಮೂಲಕ ಇದು ಹೊರ ಬರದೇ ಇದ್ದಿದ್ದರೆ ಮುಚ್ಚಿ ಹಾಕುತ್ತಿದ್ದರು ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಹಗರಣದ ಒಳಹೊಕ್ಕು ತನಿಖೆ ನಡೆಸಬೇಕು. ಸರ್ಕಾರ ಮತ್ತು ಸಿಎಂ, ಡಿಸಿಎಂ ಗಮನಕ್ಕೆ ಒಂದೇ ಈ ಅಕ್ರಮ ನಡೆದಿದೆ. ಕೇವಲ ಒಂದು ಗಂಟೆಯಲ್ಲಿ ಹಣ ಬಿಡುಗಡೆಯಾಗಲು ಸಹಾಯ ಮಾಡಿದ್ದು ಯಾರು? ಅದೆಲ್ಲಾ ಹೊರಗೆ ಬರಬೇಕು. ತೆಲಂಗಾಣದ ಚುನಾವಣೆಗೆ ಹೋಗಿರುವ ಹಣ ಇದು. ಅಲ್ಲಿಗೆ ಹೋಗಿ ಚುನಾವಣೆ ಉಸ್ತುವಾರಿ, ಜವಾಬ್ದಾರಿ ನಿರ್ವಹಿಸಿದವರು ಯಾರು? ಯಾರ ಯಾರ ಪಾತ್ರ ಏನಿದೆ? ಎಲ್ಲವೂ ಹೊರಗೆ ಬರಬೇಕು. ವಾಲ್ಮೀಕಿ‌ ನಿಗಮ ಹಣ ತೆಲಂಗಾಣಕ್ಕೆ ಹೋಗಿದೆ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ತಂತ್ರ, ಕುತಂತ್ರ ನಡೆಸಿ ಚುನಾವಣೆಯಲ್ಲಿ ಗೆಲುವು ಪಡೆದಿಲ್ಲ

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯ ದೊಡ್ಡ ಗೆಲುವು ಜನರು ಕೊಟ್ಟ ತೀರ್ಪು. ಯಾವ ತಂತ್ರ ಕುತಂತ್ರದ ಮೂಲಕವೂ ಚುನಾವಣೆ ನಡೆಸಿಲ್ಲ. ಜನ ಗೆಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಕೇಂದ್ರ ಸಚಿವ ಸ್ಥಾನದ ವಿಚಾರ

ದೆಹಲಿಗೆ ಹೋಗಿ ಸಚಿವನಾಗುವುದಕ್ಕಿಂತ ನಾಡಿನ ಜನತೆಯ ಸಮಸ್ಯೆಗೆ ಪರಿಹಾರ ನೀಡಬೇಕು. ನೀರಾವರಿ ವಿಷಯದಲ್ಲಿ ನ್ಯಾಯ ಪಡೆಯಬೇಕು. ಮಂತ್ರಿ ಸ್ಥಾನ ಅನಂತರದ ಮಾತು. ನನ್ನ ಕಡೆಯಿಂದ ಕೇಂದ್ರಕ್ಕೆ ಯಾವ ಮುಜುಗರವೂ ಇರುವುದಿಲ್ಲ. ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ರಾಜ್ಯದ ಎಲ್ಲಾ ಸಂಸದರ ಜತೆ ಒಟ್ಟಾಗಿ ಕೆಲಸ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು ಕುಮಾರಸ್ವಾಮಿ.

ಚನ್ನಪಟ್ಟಣ ಉಪ ಚುನಾವಣೆ ವಿಚಾರ

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಇನ್ನೂ ಸಮಯಾವಕಾಶವಿದೆ. ಆರು ತಿಂಗಳು ಸಮಯವಿದೆ. ಈ ಬಗ್ಗೆ ನಾನು ಮತ್ತು ಸಿ.ಪಿ.ಯೋಗೇಶ್ವರ್ ಕುಳಿತು ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

||ಶಿಕ್ಷಕರ ಕ್ಷೇತ್ರದ ಗೆಲುವಿಗೆ ಹೆಚ್ಡಿಕೆ ಸಂತಸ||

ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಎಸ್ ಎಲ್ ಬೋಜೇಗೌಡರು ಮತ್ತು ಕೆ.ವಿವೇಕಾನಂದ ಅವರು ದೊಡ್ಡ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯ ಗಳಿಸಿರುವುದಕ್ಕೆ ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು.

ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಮೈತ್ರಿ ಶಕ್ತಿ ಏನು ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿದೆ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು, ನಾಯಕರು ಸಂಘಟಿತವಾಗಿ ಕೆಲಸ ಮಾಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಶಿಕ್ಷಕರು ಆಶೀರ್ವಾದ ಮಾಡಿದ್ದಾರೆ. ಎಲ್ಲಾ ಶಿಕ್ಷಕರು ಹಾಗೂ ಎರಡು ಪಕ್ಷಗಳ ಕಾರ್ಯಕರ್ತರಿಗೆ ಹೃದಯ ತುಂಬಿದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು ಮಾಜಿ ಮುಖ್ಯಮಂತ್ರಿಗಳು.

ಗೆಲುವು ಸಾಧಿಸಿರುವ ಇಬ್ಬರೂ ಅಭ್ಯರ್ಥಿಗಳು ಶಿಕ್ಷಕರ ದನಿಯಾಗಿ ಪ್ರಾಮಾಣಿಕ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಈ ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯ ನಂತರ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಸೋತಿದೆ. ಇನ್ನೇನು ಮುಗಿದೇ ಹೋಯಿತು ಎನ್ನುತ್ತಿದ್ದ ಜೆಡಿಎಸ್ ಗೆದ್ದಿದೆ. ಅದಕ್ಕೆ ನಮ್ಮ ಮೈತ್ರಿ ಬಗ್ಗೆ ಕಾಂಗ್ರೆಸ್ ನಿದ್ದೆಗೆಟ್ಟಿತ್ತು ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿಗಳು.

ಕಾಂಗ್ರೆಸ್ ಪಕ್ಷವನ್ನು ತಡೆಯೋದಕ್ಕೆ ಆಗುವುದಿಲ್ಲ. ಮುಂದಿನ ಹತ್ತು ವರ್ಷ ನಾವೇ ಇರುತ್ತೇವೆ ಎಂದಿದ್ದವರಿಗೆ ಜನರು ಉತ್ತರ ಕೊಟ್ಟಿದ್ದಾರೆ. ಒಂದೇ ವರ್ಷದಲ್ಲಿ ಜನತೆ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ‌ ಇವರ ದುರಂಹಾರ ಇಳಿಯಲಿದೆ ಎನ್ನುವುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದರು ಕುಮಾರಸ್ವಾಮಿ.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಈ ಸಂದರ್ಭದಲ್ಲಿ ಉಪ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button