*ಬೆಳಗಾವಿಯಲ್ಲಿ ರುಂಡವಿಲ್ಲದ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ವ್ಯಕ್ತಿಯೊಬ್ಬರ ರುಂಡವಿಲ್ಲದ ಮೃತದೇಹ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಕಂಡೇಯ ನದಿಯಲ್ಲಿ ಪತ್ತೆಯಾಗಿದೆ.
ಹೂನಗಾ ಸೇತುವೆ ಸಮೀಪ ಇಂದು ಮುಂಜಾನೆ ನದಿಯಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆ ಕಾಕತಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ನಾಯಿಕ ಹಾಗೂ ಸಿಬ್ಬಂದಿ ಉಮೇಶ್ ಗದಗ ಸೇರಿದಂತೆ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು. ನದಿಯಿಂದ ಮೃತದೇಹವನ್ನು ಹೊರತೆಗೆದು ಪರಿಶೀಲನೆ ನಡೆಸಿದ ಪೊಲೀಸರು, ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.
ವ್ಯಕ್ತಿಯನ್ನು ಕೊಲೆ ಮಾಡಿ ರುಂಡವನ್ನು ಬೇರ್ಪಡಿಸಿ, ಮೃತದೇಹವನ್ನು ನದಿಗೆ ಎಸೆಯಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಮೃತನ ಗುರುತು ಪತ್ತೆ ಹಚ್ಚುವ ಜೊತೆಗೆ ಘಟನೆಯ ಹಿಂದಿನ ಕಾರಣ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.
ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




