Kannada NewsKarnataka NewsLatest

ಕೊನೆಗೂ ಅಮಾನತುಗೊಂಡ ಮುಖ್ಯಾಧ್ಯಾಪಕಿ

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಲಿಂಗನಮಠ ಸರಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಜ್ಯೋತಿ ಭಂಡಾರಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ  ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ  ಆದೇಶ ಹೊರಡಿಸಿದ್ದಾರೆ.

ಅವರು ಪೊಲೀಸರೊಂದಿಗೆ ಹಾಗೂ ಗ್ರಾಮಸ್ಥರೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಗ್ರಾಮಸ್ಥರಿಂದ ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. ಕಳ್ಳಥನ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆೆಗೆ ತನಿಖೆಗೆ ಸಹಕರಿಸದಿರುವ ಪ್ರಕರಣ ಗಂಭೀರತೆ ಪಡೆದಿತ್ತು.

ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಕಳೆದ ಅಕ್ಟೊಬರ್  ನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಕಳ್ಳತನವಾದ ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಖಾನಾಪುರ ಮತ್ತು ನಂದಗಡ ಪೋಲಿಸ್ ಅಧಿಕಾರಿಗಳು ತನಿಖಾ ಕಾರ್ಯವನ್ನು ಚುರುಕುಗೊಳಿಸಿದ್ದ  ಸಂದರ್ಭದಲ್ಲಿ ಪೋಲಿಸ್ ಶ್ವಾನದಳ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಆವರಣದ ಒಳಗಿನಿಂದ ಕಳ್ಳರು ಹಾದು ಹೋಗಿರುವ ದಾರಿಯ ಸುಳಿವು ನೀಡಿತ್ತು.

ಇದನ್ನು ಆಧರಿಸಿ ಆರೋಪಿತರ ಪತ್ತೆಗಾಗಿ ಪ್ರೌಢಶಾಲೆಯ ಸಿಸಿ ಟಿವಿ ಫುಟೆಜ್ ನಲ್ಲಿರುವ ದೃಶ್ಯಾವಳಿಗಳನ್ನು ಪರಿಶೀಲಿಸಲು ಪೋಲಿಸ್ ಇಲಾಖೆ ಅಧಿಕಾರಿಗಳು ಶಾಲೆಗೆ ತೆರಳಿದ್ದರು. ಆಗ ಪ್ರೌಢಶಾಲೆ ಮುಖ್ಯಾಧ್ಯಾಪಕಿ  ಜ್ಯೋತಿ ಭಂಡಾರಿ  ಪೋಲಿಸ್ ಇಲಾಖೆಗೆ ಸಹಕಾರ ನೀಡದೇ,  ಬೇಜವಾಬ್ದಾರಿಯಿಂದ ವರ್ತಿಸಿದ್ದಲ್ಲದೇ, ತನಿಖಾ ಅಧಿಕಾರಿಗಳ ಮೇಲೆ ಶಿಕ್ಷಣ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿ ಕರ್ತವ್ಯಲೋಪ ಎಸಗಿದ್ದರು.

ಈ ಕುರಿತು ಸದರಿ ಮುಖ್ಯಾಧ್ಯಾಪಕಿ ವಿರುದ್ಧ ನಂದಗಡ ಪೋಲಿಸ ಠಾಣೆಯಲ್ಲಿ ಅಪರಾಧ ಸಂಖ್ಯೆ  110/2019 ಐಪಿಸಿ ಕಲಂ 353, 186, 506 ರಡಿ ಪ್ರಕರಣ ದಾಖಲಾಗಿದೆ. ಈ ವಿಷಯದ ಗಂಭೀರತೆಯನ್ನು ಅರಿತು  ಇವರ ಮೇಲೆ ಇಲಾಖಾ ವಿಚಾರಣೆಯನ್ನು ಕರ್ನಾಟಕ ಸಿವಿಲ್‌ ಸೇವಾ ನಿಯಮ 1957ರ ನಿಯಮ ೧೧ರಡಿ ಕೈಗೊಳ್ಳಬಹುದಾದ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸುವುದು ಸೂಕ್ತವೆಂದು ಭಾವಿಸಿ  ಲಿಂಗನಮಠ ಸರಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕಿ ಜ್ಯೋತಿ ಭಂಡಾರಿ ಅವರನ್ನು ಅಮಾನತ್ತು ಮಾಡಲಾಗಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button