ನೀರಿನಲ್ಲಿದೆ ಆರೋಗ್ಯದ ಗುಟ್ಟು

ಜಯಶ್ರೀ ಜೆ. ಅಬ್ಬಿಗೇರಿ ಬೆಳಗಾವಿ
ನಮ್ಮ ದೇಹ ಶೇ ೭೫ ರಷ್ಟು ನೀರಿನಾಂಶದಿಂದ ನಿರ್ಮಾಣಗೊಂಡಿದೆ. ಊಟ ತಿಂಡಿ ಇಲ್ಲದೇ ಇರಬಹುದು. ಆದರೆ ನೀರಿಲ್ಲದೇ ಇರಲು ಸಾಧ್ಯವಿಲ್ಲ. ಅದಕ್ಕೇ ನೀರನ್ನು ಜೀವ ಜಲ ಎಂದು ಕರೆಯುತ್ತೇವೆ. ನೀರನ್ನು ಯಾವಾಗ? ಎಷ್ಟು ಕುಡಿಯುವುದು? ಎನ್ನುವುದರ ಕುರಿತು ಅನೇಕ ಸಂಶೋಧನೆಗಳು ನಡೆಯುತ್ತಲೇ ಇವೆ.

ಎಷ್ಟು ವಯಸ್ಸು ಎಷ್ಟು ತೂಕದವರು ಯಾವ ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದರ ಕುರಿತಾದ ಸಂದೇಶಗಳನ್ನು ನಾವು ಅಲ್ಲಲ್ಲಿ ಓದುತ್ತಲೇ ಇರುತ್ತೇವೆ. ಆರೋಗ್ಯ ರಕ್ಷಣೆಗಾಗಿ ನೀರು ಅದೆಷ್ಟು ಮುಖ್ಯ ಎಂದು ತಿಳಿದು ಹುಬ್ಬೇರಿಸುವುದೂ ಉಂಟು. ನಮ್ಮಲ್ಲಿ ನೀರು ಸೇವನೆಯ ಬಗ್ಗೆ ಉದಾಸೀನತೆಯೇ ಹೆಚ್ಚು.

ಆರೋಗ್ಯ ಕ್ಷೀಣಿಸಿದಾಗಲೇ ನೀರಿನ ಸೇವನೆ ಅದೆಷ್ಟು ಮಹತ್ವದ್ದು ಅಂತ ಜ್ಞಾನೋದಯವಾಗುವುದು. ನೀರು ಇಷ್ಟೆಲ್ಲ ಸಹಕಾರಿ ಅಂತ ನಮಗೆ ಗೊತ್ತಿರುವುದು ತುಂಬಾ ಕಡಿಮೆ. ಅತಿ ಬಾಯಾರಿಕೆ ಆದಾಗ ಅದೂ ಬೇಸಿಗೆಯಲ್ಲಿ ಏನೆಲ್ಲ ತಂಪು ಪಾನೀಯಗಳನ್ನು ಸೇವಿಸಿದರೂ ಮನಸ್ಸಿಗೆ ಸಮಾಧಾನವಾಗುವುದಿಲ್ಲ. ಗಟ ಗಟನೇ ನೀರು ಕುಡಿದಾಗ ಹಿತಾನುಭವ ಉಂಟಾಗುತ್ತದೆ.ಲಅಮೃತ ಸೇವಿಸಿದಷ್ಟು ಖುಷಿ ನೀಡುತ್ತದೆ. ಆಗ ನೀರಿಗೆ ಸಮನಾದುದು ಯಾವುದೂ ಇಲ್ಲ ಅಂತ ಅನುಭವಕ್ಕೆ ಬಂದೇ ಬರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳ್ಳೆಯದು ಅಂತ ನಮ್ಮಲ್ಲಿ ಬಹುತೇಕ ಜನರಿಗೆ ಗೊತ್ತು. ನೀರು ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದಲ್ಲದೇ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದ ಕಾಪಾಡುವುದು. ಮುಂಜಾನೆದ್ದು ನೀರು ಸೇವಿಸಿದರೆ ಎಷ್ಟೆಲ್ಲ ರೋಗಗಳಿಂದ ಮುಕ್ತರಾಗುತ್ತೇವೆ, ಏನೆಲ್ಲ ಪ್ರಯೋಜನಗಳಿವೆ ಅಂತ ಗೊತ್ತಾದರೆ ಪಾಲಿಸಲೇಬೇಕು ಎಂದೆನಿಸದೇ ಇರದು.

ತೂಕ ಇಳಿಕೆ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯವುದರಿಂದ ಅತಿ ಮುಖ್ಯ ಲಾಭವೆಂದರೆ ಮೈ ತೂಕ ಇಳಿಸಿಕೊಳ್ಳಬಹುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ಅಯ್ಯೋ! ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಬಹುದೇ? ಅಚ್ಚರಿಯೆನಿಸಿದರೂ ನಿಜ. ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ತೂಕ ಕಡಿಮೆ ಮಾಡಿಕೊಳ್ಳಬಹುದು. ಜೀರ್ಣಾಂಗದಲ್ಲಿರುವ ಎಲ್ಲ ವಿಷ ಪದಾರ್ಥಗಳು ಹೊರ ಹೋಗುತ್ತವೆ. ಇದರಿಂದ ಸುಖಾನುಭವ ಉಂಟಾಗುತ್ತದೆ. ಇದು ಕಳ್ಳ ಹಸಿವು ಬಾಯಿ ಚಪಲಕ್ಕೆ ಬ್ರೇಕ್ ಹಾಕುತ್ತದೆ. ಯದ್ವಾ ತದ್ವಾ ತಿಂದು ಬೊಜ್ಜಿಗೆ ಬಲಿಯಾಗುವುದನ್ನು ತಡೆಯುತ್ತದೆ.

ವಿಷ ಪದಾರ್ಥ ಹೊರ ಹಾಕುತ್ತದೆ

ದೇಹದಲ್ಲಿ ಶೇಖರಣೆಯಾದ ವಿಷ ಪದಾರ್ಥಗಳನ್ನು ಹೊರಗೆ ಹಾಕುತ್ತದೆ. ಬೆಳಿಗ್ಗೆ ಸೇವಿಸಿದ ನೀರು ಹೊಟ್ಟೆ ಮತ್ತು ಕರುಳಿಗೆ ಹೋಗಿ ಶುಚಿಗೊಳಿಸುತ್ತದೆ. ರಾತ್ರಿ ಹೊತ್ತು ನಮ್ಮ ದೇಹ ವಿಷಕಾರಿ ಪದಾರ್ಥವನ್ನು ಬೇರೆಯಾಗಿ ಇಟ್ಟಿರುತ್ತದೆ. ಇಂಥ ವಿಷ ಪದಾರ್ಥವನ್ನು ಸುಲಭವಾಗಿ ಹೊರ ಹಾಕಲು ಇರುವ ಸುಲಭ ವಿಧಾನ ಎಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದು. ಇದರಿಂದ ಮೈ ಮನಸ್ಸು ಉಲ್ಲಸಿತವಾಗುತ್ತವೆ. ಮಾಂಸ ಖಂಡಗಳ ಜೀವಕೋಶಗಳು ಮತ್ತು ಹೊಸ ರಕ್ತ ಕಣಗಳು ಜಾಸ್ತಿ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಆರೋಗ್ಯ ವೃದ್ಧಿ ಆಗುತ್ತದೆ.

ಫಳ ಫಳ ಹೊಳೆಯುವ ಕೂದಲು

ಮೈಯಲ್ಲಿ ನೀರಿನ ಅಂಶ ಕಡಿಮೆ ಆಗುವುದರಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೂದಲೆಳೆಯ ಒಟ್ಟು ತೂಕದಲ್ಲಿ ಕಾಲು ಭಾಗ ನೀರಿರುತ್ತದೆ ಎನ್ನುವುದು ಆಶ್ಚರ್ಯ ತರುತ್ತದೆಯಲ್ಲವೇ? ತಕ್ಕ ಪ್ರಮಾಣದಷ್ಟು ನೀರು ಸೇವನೆ ಆರೋಗ್ಯಕರವಾದ ಫಳ ಫಳವೆಂದು ಹೊಳೆಯುವ ಮೃದುವಾದ ಕೂದಲು ಪಡೆಯಲು ಸಹಕಾರಿ.

ಅಸಿಡಿಟಿಗೆ ರಾಮಬಾಣ

ಬಹುತೇಕ ಜನರಿಗೆ ಆಸಿಡಿಟಿ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಅಜೀರ್ಣ, ಎದೆ ಉರಿ ಕಾಣಿಸಿಕೊಳ್ಳುತ್ತದೆ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಗಟ ಗಟ ನೀರು ಕುಡಿಯುವುದರಿಂದ ಆಸಿಡಿಟಿ ಎದೆ ಮಟ್ಟದಿಂದ ಕೆಳಕ್ಕೆ ಹೋಗಿ ಡೈಲ್ಯೂಟ್ ಆಗುತ್ತದೆ. ಇದರಿಂದ ಆಸಿಡಿಟಿ ಮುಕ್ತರಾಗಲು ಸಾಧ್ಯವಾಗುವುದು.

ಮೈ ಕಾಂತಿ ವರ್ಧನೆ

ನೀರಿನ ಸೇವನೆ ತಕ್ಕ ಪ್ರಮಾಣದಲ್ಲಿ ಇರದೇ ಹೋದರೆ ವಯಸ್ಸಿಗೆ ಮುಂಚೆ ಚರ್ಮ ಸುಕ್ಕುಗಟ್ಟುವ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಅಧ್ಯಯನದ ಪ್ರಕಾರ ಖಾಲಿ ಹೊಟ್ಟೆಗೆ ೫೦೦ ಎಮ್ ಎಲ್ ನೀರು ಕುಡಿಯುವುದರಿಂದ ರಕ್ತ ಚಲನೆ ಚೆನ್ನಾಗಿ ಆಗುತ್ತದೆ. ದಿನದ ಬೇರೆ ಬೇರೆ ಸಮಯದಲ್ಲಿ ನೀರು ಸೇವನೆಯಿಂದ ಅಲ್ಲಲ್ಲಿ ಉತ್ಪತ್ತಿಯಾಗುವ ವಿಷಕಾರಿ ಅಂಶಗಳು ಹೊರ ಹೋಗುತ್ತವೆ. ಹೀಗಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಜೀರ್ಣ ಶಕ್ತಿ ವೃದ್ಧಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಆಗುವುದು. ಮತ್ತು ಸುಮಾರು ಶೇ ೨೪ ರಷ್ಟು ಜೀರ್ಣ ಶಕ್ತಿ ವೃದ್ಧಿಯಾಗುವುದು. ದೊಡ್ಡ ಕರಳು ಶುಚಿಯಾಗುತ್ತದೆ ಮತ್ತು ಅದು ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಕಿಡ್ನಿ ಕಲ್ಲು ದೂರ

ಕಿಡ್ನಿ ಕಲ್ಲು ಉಂಟಾಗಲು ಮುಖ್ಯ ಕಾರಣ ಆಸಿಡಿಟಿ. ಮುಂಜಾನೆದ್ದು ನೀರು ಕುಡಿಯುವುದರಿಂದ ಆಸಿಡಿಟಿ ಡೈಲ್ಯೂಟ್ ಆಗುತ್ತದೆ.ಹೀಗಾಗಿ ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಮುಕ್ತರಾಗಲು ಸಾಧ್ಯ.

ರೊಗ ನಿರೋಧಕ ಶಕ್ತಿ ವರ್ಧನೆ

ದೇಹವು ಸಣ್ಣ ಪುಟ್ಟ ಕಾಯಿಲೆಗಳಿಗೆ ತಾನೇ ಔಷಧಿಯನ್ನು ಉತ್ಪಾದಿಸುವ ವ್ಯವಸ್ಥೆ ಹೊಂದಿದೆ. ಅದು ಸಮತೋಲನದಲ್ಲಿರುವ ಹಾಗೆ ನೋಡಿಕೊಳ್ಳುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಮ್ಮನ್ನು ರೋಗ ರುಜಿನಗಳಿಂದ ದೂರ ಇಡುತ್ತದೆ.
ಇಷ್ಟೆಲ್ಲ ಕಾಯಿಲೆಗಳಿಗೆ ರಾಮಬಾಣವಾಗಿರುವ ನೀರು ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿ. ನೀರಿನಲ್ಲಿದೆ ಆರೋಗ್ಯದ ಗುಟ್ಟು! ಹೆಚ್ಚು ಖರ್ಚಿಲ್ಲದ ಸರಳೋಪಾಯ. ಹಾಗಾದರೆ ತಡವೇಕೆ? ನಾಳೆಯಿಂದಲೇ ಖಾಲಿ ಹೊಟ್ಟೆಗೆ ನೀರು ಸೇವಿಸೋಣ, ಆರೋಗ್ಯ ವೃದ್ಧಿಸಿಕೊಳ್ಳೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button