ಬೆಳಗಾವಿ ಜಿಲ್ಲೆಯಲ್ಲಿ ಮೇಗಾ ಡೈರಿ ಸ್ಥಾಪನೆಗೆ ಪ್ರಯತ್ನ – ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ( ಆರ್‌ಸಿಇಪಿ) ಒಪ್ಪಂದದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿರುವುದು ಸ್ವಾಗತಾರ್ಹ. ಇದು ದೇಶದ ಒಳ್ಳೆಯ ಬೆಳವಣಿಗೆಯಾಗಿದ್ದು, ರೈತ ಸಮುದಾಯ ನಿರಾಳವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬ್ಯಾಂಕಾಕ್‌ನಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸುವ ಮೂಲಕ ದೇಶದ ರೈತರ ಹಿತ ಕಾಪಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ. ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಉತ್ಪಾದನೆಯಾಗುವ ಹಾಲಿನ ಉತ್ಪಾದನಾ ವೆಚ್ಚವು ಕಡಿಮೆಯಾಗಿ ಅಂತಹ ಹಾಲಿನ ಉತ್ಪನ್ನಗಳನ್ನು ದೇಶೀಯ ಹಾಲಿನ ದರಕ್ಕಿಂತಲೂ ಕಡಿಮೆ ದರದಲ್ಲಿ ಮಾರಾಟವಾಗುವ ಸಾಧ್ಯತೆಯಿತ್ತು ಎಂದು ಹೇಳಿದರು.
ರೈತರ ಸೇವೆ ಮಾಡುವ ಉದ್ಧೇಶದಿಂದ ನನಗೆ ಕೆಎಂಎಫ್ ಅಧ್ಯಕ್ಷನಾಗಬೇಕೆಂಬ ಆಸೆ ಇತ್ತು. ಇದೀಗ ನನಗೆ ಸಚಿವ ಸ್ಥಾನಕ್ಕಿಂತಲೂ ಹೆಚ್ಚಿನ ಪದವಿ ಸಿಕ್ಕಿದೆ. ನಾನೆಂದೂ ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ನನ್ನ ಶಕ್ತಿ ಸಾಮರ್ಥ್ಯ ಕೆಎಂಎಫ್‌ಆಗಿದೆ. ಅರಬಾವಿ ಶಾಸಕನಾಗಿರುವ ನಾನು ಕೆಎಂಎಫ್‌ನ್ನು ದೇಶದಲ್ಲಿ ನಂ.೧ನೇ ಸ್ಥಾನಕ್ಕೆ ತರುವ ಕೆಲಸ ಮಾಡುತ್ತೇನೆ. ದೇವರು, ತಾಯಿ-ತಂದೆ, ರೈತರು ಹಾಗೂ ಜನರ ಆರ್ಶೀವಾದದಿಂದ ಕೆಎಂಎಫ್ ಅಧ್ಯಕ್ಷನಾಗಿದ್ದೇನೆ.
ಇತ್ತೀಚಿನ ದಿನಗಳಲ್ಲಿ ಹಾಲಿನ ಸೊಸೈಟಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಸಮನ್ವಯ ಕೊರತೆ ಇರುವುದರಿಂದ ಗುಣಮಟ್ಟದ ಹಾಲು ಪೂರೈಕೆ ಮಾಡಲು ಆಗುತ್ತಿಲ್ಲ. ಈ ಕುರಿತು ವ್ಯಾಪಕ ದೂರುಗಳಿವೆ. ರೈತರ ಹಿತ ಕಾಪಾಡುವುದು ಮುಖ್ಯವಾಗಿದೆ. ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ತಿಳಿವಳಿಕೆ ಮೂಡಿಸಬೇಕು. ಹಾಲಿಗೆ ಸಬ್ಸಿಡಿ ಸಿಗುತ್ತಿರುವುದು, ಪೌಷ್ಟಿಕತೆ ಕುರಿತು ತಿಳಿವಳಿಕೆ ಮೂಡಿಸಬೇಕು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮಲ್ಲಿ ಬರುವಂತೆ ಕೆಲಸ ಮಾಡಬೇಕು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ಮೇಗಾ ಡೈರಿ
ಬೆಳಗಾವಿ ಜಿಲ್ಲೆಯಲ್ಲಿ ಮೇಗಾ ಡೈರಿ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಮೇಗಾ ಡೈರಿ ಮಾಡುವುದರಿಂದ ಜಿಲ್ಲೆಯಲ್ಲಿ ೫೦೦-೬೦೦ ನಿರುದ್ಯೋಗಿಗಳು ಉದ್ಯೋಗ ಸೃಷ್ಟಿಯಾಗಲಿದೆ. ಬೆಂಗಳೂರು ಒಕ್ಕೂಟ, ಧಾರವಾಡ, ಬೆಳಗಾವಿ, ತುಮಕೂರು ಹಾಗೂ ಕೆಎಂಎಫ್ ದಿಂದ ಒಟ್ಟು ೮೦೦ ಹುದ್ದೆಗೆ ಶೀಘ್ರ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.
ಖಾಸಗಿ ಡೈರಿಗೆ ಹೋಗದೆ ನಮ್ಮ ಒಕ್ಕೂಟಕ್ಕೆ ಬರುವಂತೆ ರೈತರ ಪ್ರೀತಿಯನ್ನುಗಳಿಸಬೇಕು. ರೈತರನ್ನು ಮನವೊಲಿಸಬೇಕು. ಇದರಿಂದ ನಮ್ಮ ಒಕ್ಕೂಟಕ್ಕೆ ಹೆಚ್ಚಿನ ಲಾಭವಾಗುತ್ತದೆ. ಜಿಲ್ಲೆಯಲ್ಲಿ ೬೦೦ ಸಂಘಗಳು ಕೆಲಸ ಮಾಡುತ್ತಿದೆ. ಇವುಗಳ ಸಂಖ್ಯೆ ಹೆಚ್ಚಳ ಮಾಡಲು ಪ್ರಯತ್ನ ಮಾಡಲಾಗುವುದು. ಇಡೀ ದೇಶದಲ್ಲಿ ಸಹಕಾರಿ ರಂಗದಲ್ಲಿ ಅಮೂಲ್ ಮೊದಲ ಸ್ಥಾನದಲ್ಲಿದ್ದರೆ, ಕೆಎಂಎಫ್ ಎರಡನೇ ಸ್ಥಾನದಲ್ಲಿದೆ. ಖಾಸಗಿ ವಲಯದೊಂದಿಗೆ ಪೈಪೋಟಿ ನೀಡುತ್ತದೆ ಎಂಬುದಕ್ಕೆ ನಮ್ಮ ಕೆಎಂಎಫ್ ಸಾಕ್ಷಿಯಾಗಿದೆ. ಪ್ರತಿನಿತ್ಯ ಕರ್ನಾಟಕ ಹಾಲು ಮಹಾಮಂಡಳ. ೮೦ ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಮುಂದಿನ ದಿನಗಳಲ್ಲಿ ೧ ಕೋಟಿ ಲೀಟರ್ ಸಂಗ್ರಹ ಗುರಿ ಹೊಂದಲಾಗಿದೆ. ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಗುಣಮಟ್ಟ ನಿರ್ವಹಣೆ ಮಾಡುವುದು ನಮ್ಮ ಗುರಿ. ನೀವು ಉತ್ತಮ ಹಾಲು ಪೂರೈಸಿದರೆ ನಿಮಗೆ ಲಾಭ ವಾಗುತ್ತದೆ ಎಂದು ಹೇಳಿದರು.
ಮಕ್ಕಳಿಗೆ ಹಾಲಿನ ಪುಡಿ ಪ್ಯಾಕೇಟ್
ಬೆಳಗಾವಿ ಜಿಲ್ಲೆಯ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಪ್ಯಾಕೇಟ್ ಹಾಲು ದುರ್ಬಳಕೆ ಮಾಡಿದ ಕುರಿತು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಹಾಲಿನ ಬದಲಿಗೆ ಹಾಲಿನ ಪುಡಿ ಪ್ಯಾಕೇಟ್ ನೀಡಲು ಕ್ರಮ ಕೈಗೊಳ್ಳಲಾಗುವುದು. ೧೫೦ ಎಂಎಲ್ ಹಾಲಿನ ಪುಡಿ ವಿತರಿಸುವ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಉತ್ತಮ ಪೌಷ್ಟಿಕ, ಸ್ವಾಧ ಭರಿತ ಹಾಲು ಪೂರೈಸಲಾಗುವುದು. ನಿತ್ಯ ಶಾಲಾ ಮಕ್ಕಳಿಗೆ ನಿತ್ಯ ೭೦ ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತದೆ ಎಂದು ಹೇಳಿದರು.
ಶೀಘ್ರ ಸಬ್ಸಿಡಿ ಪಾವತಿ
ಹಾಲು ಪೂರೈಸಿದ ರೈತರಿಗೆ ಕಳೆದ ೬-೭ ತಿಂಗಳಿಂದ ಸಬ್ಸಿಡಿ ನೀಡುವುದು ಬಾಕಿಯಿದೆ. ಆಧಾರ ಕಾರ್ಡ ಸೇರಿದಂತೆ ಅಗತ್ಯ ದಾಖಲೆಗಳ ಸಮಸ್ಯೆಯಿಂದಾಗಿ ರೈತರ ಬ್ಯಾಂಕ್ ಖಾತೆಗೆ ಸಬ್ಸಿಡಿ ಜಮಾ ಆಗಿರಲಿಲ್ಲ. ಇದೀಗ ಎಲ್ಲ ಸಮಸ್ಯೆ ನಿವಾರಣೆಯಾಗಿದ್ದು, ಶೀಘ್ರವೇ ರೈತರ ಖಾತೆಗೆ ಸಬ್ಸಿಡಿ ಜಮಾ ಮಾಡಲಾಗುವುದು.
ಪ್ರವಾಹದಲ್ಲಿ ಕೆಲವೊಂದು ಸೊಸೈಟಿಗಳ ಕಚೇರಿಯ ಕಟ್ಟಡ ಹಾಗೂ ದಾಖಲೆ ಪತ್ರಗಳು ಹಾನಿಯಾಗಿದ್ದು, ರೂ.೨೦ರಿಂದ ೩೦ ಲಕ್ಷ ಹಾನಿಯಾಗಿದೆ. ಈ ಹಾನಿ ವೆಚ್ಚವನ್ನು ಕೆಎಂಎಫ್ ವತಿಯಿಂದ ಭರಿಸಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ಘೋಷಿಸಿದರು.
ಕೆಎಂಎಫ್‌ಗೆ ಕಳೆದ ಬಾರಿ ರೂ. ೧೩೩ ಕೋಟಿ ಲಾಭವಾಗಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಮಾಡುವ ಗುರಿ ಹೊಂದಲಾಗಿದೆ.
ನಮ್ಮ ಸಂಸ್ಥೆಗೆ ಹಾಲು ಪೂರೈಸುವ ರೈತರ ಮಕ್ಕಳಿಗೆ ಹಾಸ್ಟೆಲ್ ತೆರೆಯುವ ಉದ್ಧೇಶ ಹೊಂದಲಾಗಿದೆ. ರೈತರ ಮಕ್ಕಳಿಗೆ ರಿಯಾಯ್ತಿ ದರದಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ, ಹಾಲಿನ ಪುಡಿ ಘಟಕ ಹೊಂದಿದ ಮೇಘಾ ಡೈರಿ, ಪಶು ಆಹಾರ ಘಟಕ, ಟೆಟ್ರಾ ಪ್ಯಾಕೇಟ್‌ನಲ್ಲಿ , ಬಾಟಲಿಗಳಲ್ಲಿ ಮಜ್ಜಗೆ, ಲಸ್ಸಿ, ಸುಹಾಸಭರಿತ ಹಾಲು ಹಾಗೂ ಉತ್ಪಾದನಾ ಘಟಕ ತೆರೆಯಬೇಕು. ನಂದಿನಿ ಹಾಲು ಮತ್ತು ಉತ್ಪನ್ನಗಳ ಮಳಿಗೆ, ಮೇಘಾ ಶೀತಲೀಕರಣ ಕೇಂದ್ರ ತೆರೆಯಲು ಮನವಿ ಸಲ್ಲಿಸಿದರು.
ಅದ್ಧೂರಿ ಸ್ವಾಗತ
ಕೆಎಂಎಫ್ ಅಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಬೆಳಗಾವಿ ನಗರಕ್ಕೆ ಆಗಮಿಸಿದ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಅದ್ಧೂರಿ ಸ್ವಾಗತ ನೀಡಲಾಯಿತು.
ಬಾಲಚಂದ್ರ ಜಾರಕಿಹೊಳಿ ಅವರ ಅದ್ಧೂರಿ ಸ್ವಾಗತಕ್ಕೆ ತೆರೆದ ವಾಹನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಬಾಲಚಂದ್ರ ಜಾರಕಿಹೊಳಿ ಅವರು ತೆರೆದ ವಾಹನದಲ್ಲಿ ತೆರಳದೇ ಜನಸಾಮಾನ್ಯರ ಜೊತೆಗೆ ನಡೆದುಕೊಂಡು ಸನ್ಮಾನ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು. ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಳ್ಳಿಗದೆ, ಗಣೇಶ ಮೂರ್ತಿ, ಮೈಸೂರು ಪೇಟಾ ಹಾಕಿ ಅದ್ಧೂರಿಯಿಂದ ಸನ್ಮಾನಿಸಲಾಯಿತು.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾದ ಬಾಬು ಕಟ್ಟಿ, ಸೋಮಲಿಂಗಪ್ಪ ಮುಗಳಿ, ಉದಯಸಿಂಹ ಶಿಂಧೆ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಅಪ್ಪಾಸಾಬ ಅವತಾಡೆ, ಬಾಬುರಾವ ವಾಘ್ಮೋರೆ, ವಿರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಸವಿತಾ ಖಾನಪ್ಪಗೋಳ, ಸಹಕಾರ ಸಂಘಗಳ ಉಪನಿಂಧಕರ, ಕೆ.ಎಲ್.ಶ್ರೀನಿವಾಸ್, ಕರ್ನಾಟಕ ಹಾಲು ಮಂಡಳಿ ಪ್ರತಿನಿಧಿ ಡಾ.ಕೆ.ಪಿ.ಶಿವಶಂಕರ ಉಪಸ್ಥಿತರಿದ್ದರು.
ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಬಿ.ಎಂ. ಪರಮಣ್ಣವರ ಸ್ವಾಗತಿಸಿದರು. ವ್ಯವಸ್ಥಾಪಕ ಡಾ.ಜೆ.ಆರ್. ಮನ್ನೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ನಿರ್ದೇಶಕ ಉಮೇದುಲ್ಲಾ ಖಾನ್ ವಂದಿಸಿದರು. ರಷ್ಮಿ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ