Kannada NewsKarnataka NewsLatestPolitics

*ಮಧ್ಯರಾತ್ರಿವರೆಗೆ ಸಂಧಾನ ಸಭೆ ನಡೆಸಿ ರಾಮಲಿಂಗಾರೆಡ್ದಿ ಮನವೊಲಿಸಿದ ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಧ್ಯರಾತ್ರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದು, ಒನ್ ಟು ಒನ್ ಮೀಟಿಂಗ್ ಮಾಡಿ ಮನವೊಲಿಕೆ ಮಾಡಿದ್ದಾರೆ.

ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ, ಶುಕ್ರವಾರ ತಡರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ಸತತ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಸಂಧಾನ ಮಾತುಕತೆ ನಡೆಸಿದ್ದಾರೆ.

Home add -Advt

‘ಕೊಟ್ಟರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡಿ, ಇಲ್ಲದಿದ್ದರೆ ಸಚಿವ ಸ್ಥಾನವೇ ಬೇಡ’ ಎಂದು ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾ ರೆಡ್ಡಿ, ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. 2023ರಲ್ಲೇ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಮನೆಗೆ ಬಂದು ಬೆಂಗಳೂರು ಅಭಿವೃದ್ಧಿ ಖಾತೆಯ ಭರವಸೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ಬಹಿರಂಗಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ ಡಿ.ಕೆ.ಶಿವಕುಮಾರ್, ‘ಮಾತು ಕೊಟ್ಟಿದ್ದು ನಿಜ, ಆದರೆ ಖಾತೆ ಬದಲಾವಣೆ ವಿಚಾರವನ್ನು ಹೈಕಮಾಂಡ್ ನಿರ್ಧರಿಸಬೇಕು’ ಎನ್ನುತ್ತಲೇ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವುದಾಗಿ ಹೇಳಿದ್ದರು.

ಮಧ್ಯರಾತ್ರಿ 1:30ರ ಸುಮಾರಿಗೆ ಮಾತುಕತೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಯಾವುದೇ ಆತಂಕ ಬೇಡ, ನಾವೆಲ್ಲಾ ಹಳೆಯ ಸ್ನೇಹಿತರು. ಕೂತು ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೇವೆ ಎಂದರು. ರಾಜೀನಾಮೆ ವಾಪಸ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಿಮಗೆ ಎಲ್ಲವನ್ನೂ ಹೇಳಬೇಕಾಗಿಲ್ಲ’ ಎಂದರು. ಇತ್ತ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸಿಎಂ ಧಾಟಿಯಲ್ಲೇ ಉತ್ತರಿಸಿ, ‘ಮುಖ್ಯಮಂತ್ರಿಗಳು ಏನು ಹೇಳಿದ್ದಾರೋ ಅದನ್ನೇ ನಾನು ಹೇಳುವುದು. ಎಲ್ಲ ಗೊಂದಲಗಳು ನಿವಾರಣೆಯಾಗಿವೆ’ ಎಂದು ಹೇಳಿದ್ದಾರೆ.


Related Articles

Back to top button