Kannada NewsKarnataka NewsLatest

ಮಾನವನ ಮೂಲಭೂತ ಸೌಲಭ್ಯಗಳಲ್ಲಿ ಆರೋಗ್ಯವೂ ಒಂದು – ಪ್ರಲ್ಹಾದ ಜೋಷಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗಳು ಕಟ್ಟಕಡೆಯ ವ್ಯಕ್ತಿಗೂ ಲಭಿಸುವಂತೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಮಾನವನ ಮೂಲಭೂತ ಸೌಲಭ್ಯಗಳಲ್ಲಿ ಆರೋಗ್ಯವೂ ಒಂದು ಎಂದು ತಿಳಿದು ಕಾರ‍್ಯನಿರ್ವಹಿಸಬೇಕಾಗಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಿಲು ಹಾಗೂ ಗಣ ಸಚಿವರಾದ ಪ್ರಲ್ಹಾದ ಜೋಷಿ ಅವರಿಂದಿಲ್ಲಿ ಸಲಹೆ ನೀಡಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ನೂತನವಾಗಿ ಸ್ಥಾಪಿಸಲಾದ ನರ ಮತ್ತು ರಕ್ತನಾಳ ರೋಗ ಸಂಬಂಧಿ ಖಾಯಿಲೆಗಳಿಗೆ ತೆರೆದ ಶಸ್ತ್ರಚಿಕಿತ್ಸೆ ಬದಲಾಗಿ ಅತ್ಯಾಧುನಿಕ ರೀತಿಯಲ್ಲಿ ಚಿಕಿತ್ಸೆ ನೀಡಲು ಬೈ ಪ್ಲೇನ್ ಕ್ಯಾಥಲ್ಯಾಬ ಅನ್ನು ಜನಸೇವೆಗೆ ಅರ್ಪಿಸಿ ಮಾತನಾಡಿದರು.

ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ ನೀಡಲು ಆಸ್ಪತ್ರೆಗಳು ಸದಾ ಕಾರ‍್ಯಪ್ರವೃತ್ತವಾಗಿರಬೇಕು. ಅದರಲ್ಲಿಯೂ ಆಧುನಿಕ ತಂತ್ರಜ್ಞಾನದ ಮೂಲಕ ಆರೋಗ್ಯ ಸೇವೆ ತಲುಪಿಸಲು ಕಾರ‍್ಯಯೋಜನೆಯನ್ನು ಕಾರ‍್ಯಗತಗೊಳಿಸಬೇಕು.  ಆಧುನಿಕತೆ ಬೆಳೆದಂತೆ ಆರೋಗ್ಯ ಕ್ಷೇತ್ರವೂ ಅನೇಕ ಆವಿಷ್ಕಾರಗಳೊಂದಿಗೆ ಜನಸೇವೆಗೆ ಲಭ್ಯವಾಗುತ್ತಿದೆ. ಈ ಮೊದಲು ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಸಂಪೂರ್ಣ ಭಾಗವನ್ನು ಗಾಯಗೊಳಿಸಬೇಕಾಗುತ್ತಿತ್ತು. ಇಂದು ಅದೇ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ಕೇವಲ ಒಂದು ರಂದ್ರವನ್ನು ಮಾಡಲಾಗುತ್ತದೆ. ಇದು ಜನರಿಗೂ ಸಮಯವನ್ನು ಉಳಿಸುವದರೊಂದಿಗೆ ಶೀಘ್ರಗುಣಮುಖಗೊಳಿಸುವಲ್ಲಿ ಸಹಕಾರಿಯಾಗಲಿದೆ. ಆದ್ದರಿಂದ ಇದೇ ವ್ಯವಸ್ಥೆಯನ್ನು ಕಟ್ಟಕಡೆಯ ಹಾಗೂ ದುರ್ಗಮ ಪ್ರದೇಶಗಳ ಜನರಿಗೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಈ ಭಾಗದ ಜನರಿಗೆ ನಿತ್ಯ ನೂತನ ಆರೋಗ್ಯ ಸೇವೆಯನ್ನು ಕಲ್ಪಿಸಲು ಸದಾ ಹಾತೊರೆಯುವ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಈಗ ಮತ್ತೆ ಈ ಭಾಗದ ಜನರಿಗೆ ಬೈ ಪ್ಲೇನ್ ಕ್ಯಾಥಲ್ಯಾಬ ಮೂಲಕ ಆರೋಗ್ಯ ರಕ್ಷಣೆಗೆ ನಾವು ಬದ್ಧ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದಿನಂಪ್ರತಿ ಸಾವಿರಾರು ರೋಗಿಗಳಿಗೆ ಉಚಿತ ಊಟೋಪಚಾರದ ಜೊತೆಗೆ ಚಿಕಿತ್ಸೆ ನೀಡುತ್ತಿರುವದು ಅತ್ಯಂತ ಶ್ಲಾಘನೀಯ ಎಂದರು.
ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಸುಮಾರು ೫ ಕೋಟಿ ರೂ.ಗಳ ವೆಚ್ಚದಲ್ಲಿ ಈ ಬೈ ಪ್ಲೇನ್ ಕ್ಯಾಥಲ್ಯಾಬ್ ಅನ್ನು ಸ್ಥಾಪಿಸಲಾಗಿದ್ದು, ಇಂಟರವೆನ್ಶನಲ್ ರೆಡಿಯಾಲಾಜಿ ಕಾರ‍್ಯವಿಧಾನಗಳು ಅತ್ಯಂತ ಸರಳವಾಗಿದ್ದು, ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಜನರಿಗೆ ಈ ಅತ್ಯಾಧುನಿಕ ಇಂಟರವೆನ್ಶನಲ್ ಸೇವೆಯು ಲಭ್ಯವಾಗಲಿದೆ. ಈ ಭಾಗದ ಜನರು ಪಾರ್ಶ್ವವಾಯುವಿನಿಂದ ಬಳಲುವ ಪ್ರಮಾಣವು ಕಡಿಮೆಯಾಗಲಿದೆ. ತೆರೆದ ಶಸ್ತ್ರಕ್ರಿಯೆ ಬದಲಾಗಿ ಚಿಕ್ಕ ರಂದ್ರ ಮೂಲಕ ಸ್ಟೆಂಟ ಅಳವಡಿಸಿ ರೋಗಿಗಳನ್ನು ಶೀಘ್ರವೇ ಗುಣಮುಖ, ಮೆದುಳಿನಲ್ಲಿ ಉಂಟಾಗುವ ಸ್ಟೋಕ್(ಪಾರ್ಶ್ವವಾಯು) ರಕ್ತನಾಳಗಳ ಮುದುಡುವಿಕೆ ಸೇರಿದಂತೆ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಚಿವರಾದ ಜೋಷಿ ಅವರು, ಆಸ್ಪತ್ರೆಯ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಡಾ. ವಿ ಆಯ್ ಪಾಟೀಲ, ಶಾಸಕ ಅನಿಲ ಬೆನಕೆ, ಕೆಎಲ್‌ಇ (ಕಾಹೆರ) ವಿಶ್ವವಿದ್ಯಾಲಯದ ಕುಲಪತಿ ಡಾ. ವಿವೇಕ ಸಾವೋಜಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡೈರೆಕ್ಟರ ಕ್ಲಿನಿಕಲ್ ಡಾ. ಆರ್ ಬಿ ನೇರ್ಲಿ, ಡಾ. ವಿ ಡಿ ಪಾಟೀಲ, ಡಾ. ರಾಜೇಶ ಪವಾರ, ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ನವೀನ ಮೂಲಿಮನಿ, ಡಾ. ಅಭಿನಂದನ್ ರೂಗೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button