Cancer Hospital 2
Laxmi Tai Society2
Beereshwara add32

ತಾಯಿ, ಮಗನ ಮನ ಕಲಕುವ ಕಥೆ; ಇವರನ್ನು ತಲುಪಲೇ ಇಲ್ಲ… ಸರಕಾರದ ಯೋಜನೆಗಳು

Anvekar 3

ಅಪರಿಚಿತ ಯುವಕನ ಗುರುತು ಪತ್ತೆ: ಬಡತನ, ಹಸಿವು ಸಾವಿಗೆ ಕಾರಣ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬುಧವಾರ ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಅಪರಿಚಿತ ಯುವಕನ ಆತ್ಮಹತ್ಯೆ ಪ್ರಕರಣ ಗುರುವಾರ ಹೊಸ ತಿರುವು ಪಡೆದುಕೊಂಡಿದೆ. ತನ್ನ ಕಿತ್ತು ತಿನ್ನುವ ಬಡತನಕ್ಕೆ, ನಿರುದ್ಯೋಗಕ್ಕೆ ಮತ್ತು ಹಸಿವಿನಿಂದ ಕಂಗೆಟ್ಟ ತಾಯಿಯ ಪರಿಸ್ಥಿತಿಗೆ ಮಮ್ಮಲಮರುಗಿದ ಯುವಕನೋರ್ವ ತನ್ನ ಅಸಹಾಯಕ ಪರಿಸ್ಥಿತಿಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಬಯಲಿಗೆಳೆದಿದ್ದಾರೆ.

ಪ್ರಕರಣದ ವಿವರ…!
ಮೂಲತಃ ಹಾವೇರಿ ಜಿಲ್ಲೆಯ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ (30) ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡ ಯುವಕ. ಈತನ ತಂದೆ ಬಹಳ ಹಿಂದೆಯೇ ತೀರಿಹೋಗಿದ್ದು, ತಾಯಿ ಶಾಂತವ್ವಳ (55) ಜೊತೆ ವಾಸಿಸುತ್ತಿದ್ದ. ಸ್ವಂತ ಊರಿನಲ್ಲಿ ಆಸ್ತಿಪಾಸ್ತಿ ಇಲ್ಲದ್ದರಿಂದ ಉದರಪೋಷಣೆಗಾಗಿ ಬಹಳ ವರ್ಷಗಳ ಹಿಂದೆಯೇ ಊರು ತೊರೆದು ಅಲೆಮಾರಿಗಳಾಗಿ ಅಲ್ಲಿ ಇಲ್ಲಿ ಅಲೆಯುತ್ತ ಅವಕಾಶ ಸಿಕ್ಕ ಕಡೆ ಕೆಲಸ ಮಾಡುವುದು, ಕೆಲಸ ಸಿಗದಿದ್ದಾಗ ಭಿಕ್ಷೆ ಬೇಡುವುದನ್ನು ರೂಢಿಸಿಕೊಂಡಿದ್ದರು.
ಕಳೆದ ವಾರ ಅಮ್ಮ-ಮಗ ಹುಬ್ಬಳ್ಳಿಯಿಂದ ರೈಲನ್ನೇರಿ ಗೋವಾ ರಾಜ್ಯಕ್ಕೆ ತೆರಳಿದ್ದರು. ಮೂರ್ನಾಲ್ಕು ದಿನಗಳ ಕಾಲ ಗೋವಾದ ಹಲವೆಡೆ ಅಲೆದರೂ ಅವರಿಗೆ ಉದ್ಯೋಗ ಅಥವಾ ಆಹಾರ ಸಿಕ್ಕಿರಲಿಲ್ಲ. ಗೋವಾ ರಾಜ್ಯದ ಸಹವಾಸ ಸಾಕು ಎಂದುಕೊಂಡ ಅಮ್ಮ-ಮಗ ಜ.30ರಂದು ಮರಳಿ ಹುಬ್ಬಳ್ಳಿಯತ್ತ ಸಾಗುವ ರೈಲನ್ನೇರಿದ್ದರು. ಆದರೆ ಮಾರ್ಗಮಧ್ಯದಲ್ಲಿ ರೈಲ್ವೆ ಪೊಲೀಸರು ಇವರ ಬಳಿ ಟಿಕೆಟ್ ಇಲ್ಲದಿರುವುದನ್ನು ಗಮನಿಸಿ ಅಳ್ನಾವರ ನಿಲ್ದಾಣದಲ್ಲಿ ಇಳಿಸಿದ್ದರು. ಮೂರ್ನಾಲ್ಕು ದಿನಗಳ ಕಾಲ ಹೊಟ್ಟೆಗೆ ಸರಿಯಾದ ಆಹಾರವಿಲ್ಲದ್ದರಿಂದ ಬಸವರಾಜನ ತಾಯಿ ನಿತ್ರಾಣಗೊಂಡಿದ್ದರು. ಅವರನ್ನು ನಿಲ್ದಾಣದಲ್ಲಿ ಕೂಡ್ರಿಸಿದ ಬಸವರಾಜ ತಾಯಿಗೆ ಆಹಾರ ತರುವುದಾಗಿ ಹೇಳಿ ನಿಲ್ದಾಣದಿಂದ ಹೊರಟಿದ್ದ. ಬಹಳಷ್ಟು ಸಮಯ ಅಳ್ನಾವರ ಪಟ್ಟಣದಲ್ಲಿ ಕೆಲಸಕ್ಕಾಗಿ ಮತ್ತು ಆಹಾರಕ್ಕಾಗಿ ಅಲೆದಿದ್ದ ಬಸವರಾಜನಿಗೆ ಆಹಾರವಾಗಲಿ, ಕೆಲಸವಾಗಲಿ ಸಿಕ್ಕಿರಲಿಲ್ಲ. ಭಾರವಾದ ಮನಸ್ಸಿನಿಂದ ಅಳ್ನಾವರ ಪಟ್ಟಣದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಆತನ ಮನಸ್ಸಿನಲ್ಲಿ ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಹಸಿವಿನಿಂದ ಕಂಗೆಟ್ಟ ತಾಯಿಯ ಸ್ಥಿತಿಗಳು ಜಿಗುಪ್ಸೆಯನ್ನು ತರಿಸಿದ್ದವು. ಹೀಗಾಗಿ ಆತ ಬೆಳಗಾವಿ-ಧಾರವಾಡ ಜಿಲ್ಲೆಗಳ ಗಡಿಯ ಲಿಂಗನಮಠ ಗ್ರಾಮದ ಬಳಿ ಮಾವಿನ ಮರಕ್ಕೆ ಕೊರಳೊಡ್ಡಿ ತನ್ನ ಜೀವನಕ್ಕೆ ಪೂರ್ಣ ವಿರಾಮ ನೀಡಿದ್ದ ಎಂದು ಪೊಲೀಸರು ತಿಳಿಸಿದರು.

ಇತ್ತ ತಮ್ಮ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಲಿಂಗನಮಠ ಗ್ರಾಮದ ಶ್ರೀಶೈಲ ಮಾಟೊಳ್ಳಿ ಬುಧವಾರ ದೂರು ದಾಖಲಿಸಿದ್ದರು. ದೂರಿನ ತನಿಖೆ ಆರಂಭಿಸಿದ ಪೊಲೀಸರು ಮೃತನ ಜೇಬು ತಪಾಸಣೆ ಮಾಡಿದಾಗ ಒಂದು ಮೊಬೈಲ್ ಪತ್ತೆಯಾಗಿತ್ತು. ಅದರ ಜಾಡುಹಿಡಿದು ಮೃತ ವ್ಯಕ್ತಿಯ ಮತ್ತು ಆತನ ತಾಯಿಯ ಬಗ್ಗೆ ಪತ್ತೆ ಹಚ್ಚಿದ ಪೊಲೀಸರು ಗುರುವಾರ ಖಾನಾಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿ ಶವವನ್ನು ತಾಯಿ ಶಾಂತವ್ವಳಿಗೆ ಹಸ್ತಾಂತರಿಸಿದರು.

Emergency Service

ಪಟ್ಟಣದ ಆಸ್ಪತ್ರೆಯ ಬಳಿ ಮಗನ ಶವದ ಮುಂದೆ ದಿಕ್ಕು ತೋಚದೇ ಕುಳಿತಿದ್ದ ತಾಯಿ ಶಾಂತವ್ವಳ ಪರಿಸ್ಥಿತಿ ಗಮನಿಸಿದ ಖಾನಾಪುರದ ಕದಂಬ ಫೌಂಡೇಶನ್ ಸಂಸ್ಥಾಪಕ ಜಾರ್ಡನ್ ಗೋನ್ಸಾಲ್ವಿಸ್ ತನ್ನ ಸ್ನೇಹಿತರಾದ ಕುಮಾರ ತಂಗಂ, ಮೈಕಲ್ ಅಂದ್ರಾದೆ ಅವರೊಂದಿಗೆ ಖಾನಾಪುರ ಪಟ್ಟಣ ಪಂಚಾಯ್ತಿಯ ಶವ ಸಾಗಿಸುವ ವಾಹನದಲ್ಲಿ ಬಸವರಾಜನ ಮೃತದೇಹವನ್ನು ನಂದಗಡಕ್ಕೆ ಸಾಗಿಸಿ ಶಾಸ್ತ್ರೋಕ್ತ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದರು.  

‘ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಜ್ಯದ ಜನರ ಹಿತಕ್ಕಾಗಿ ಮಹಿಳೆಯರಿಗೆ ಮಾಸಾಶನ, ವಿಧವಾ ವೇತನ, ವೃದ್ಧಾಪ್ಯ ವೇತನ, ಉಚಿತ ಪಡಿತರ ವಿತರಣೆ, ಉಚಿತ ಬಸ್ ಪ್ರಯಾಣ, ನಿರುದ್ಯೋಗಿಗಳಿಗೆ ಭತ್ಯೆ ಮತ್ತಿತರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನತೆಗೆ ಕೂಲಿ ಕೆಲಸ ನೀಡುತ್ತಿವೆ. ಆದರೆ ಹಾವೇರಿಯ ಬಸವರಾಜ ಮತ್ತು ಆತನ ತಾಯಿ ಶಾಂತಮ್ಮರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗದ ಕಾರಣ ಅವರು ಅನಾಥರಾಗಿದ್ದಾರೆ. ಜೊತೆಗೆ ಅವರು ತುತ್ತು ಅನ್ನಕ್ಕೂ ಪರಿತಪಿಸುವ ಪರಿಸ್ಥಿತಿ ಬಂದಿದೆ. ಹೊಟ್ಟೆಗೆ ಅನ್ನ ಸಿಗದೇ, ದುಡಿಯಲು ಕೆಲಸ ಸಿಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಮಧ್ಯವಯಸ್ಕ ಬಸವರಾಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡ ತಾಯಿ ಶಾಂತಮ್ಮ ಅನಾಥಳಾಗಿದ್ದಾಳೆ. ತನ್ನ ತಾಯಿಯ ಹೊಟ್ಟೆ ತುಂಬಿಸಲು ಆಗಲಿಲ್ಲ ಎಂಬ ಕಾರಣಕ್ಕೆ ಬಾಳಿ ಬದುಕಬೇಕಾದ ಮಗ ಅಕಾಲಿಕ ಸಾವಿಗೀಡಾಗಿರುವುದು ನಿಜಕ್ಕೂ ನೋವಿನ ಸಂಗತಿ. ಸರಕಾರ ಮಗನನ್ನು ಕಳೆದುಕೊಂಡ ತಾಯಿ ಶಾಂತಮ್ಮಳ ಪಾಲನೆ-ಪೋಷಣೆಯ ಜವಾಬ್ದಾರಿ ಹೊರಬೇಕು. ನೊಂದ ಮಹಿಳೆಯ ಕಣ್ಣೀರು ಒರೆಸಬೇಕು’ ಎಂದು ಕದಂಬ ಫೌಂಡೇಶನ್ ಸಂಸ್ಥಾಪಕ ಜಾರ್ಡನ್ ಗೋನ್ಸಾಲ್ವಿಸ್ ಆಗ್ರಹಿಸಿದರು.

Gokak Jyotishi add 8-2
Bottom Add3
Bottom Ad 2

You cannot copy content of this page