
‘ರೈಡ್ ಗೂ ಮುನ್ನವೇ ಹಣ ಪಾವತಿ’ ಓಲಾಗೆ ಬಿತ್ತು ಭಾರೀ ಮೊತ್ತದ ದಂಡ
- ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದಿಂದ ಓಲಾ ಸಂಸ್ಥೆಗೆ ಬರೋಬ್ಬರಿ ₹ 10 ಲಕ್ಷ ದಂಡ
- ಸಚಿವ ಪ್ರಲ್ಹಾದ ಜೋಶಿ ಸೂಚನೆ ಮೇರೆಗೆ ಕಠಿಣ ಕ್ರಮ ಕೈಗೊಂಡ CCPA
- ತಕ್ಷಣವೇ ಅನ್ಯಾಯದ ಪದ್ಧತಿ ನಿಲ್ಲಿಸುವಂತೆ ಆದೇಶ
ಪ್ರಗತಿವಾಹಿನಿ ಸುದ್ದಿ/ ನವದೆಹಲಿ: ಪ್ರಯಾಣಕ್ಕೂ ಮುನ್ನವೇ ಹಣ ಪಾವತಿಸುವಂತೆ ಗ್ರಾಹಕರ ದಾರಿ ತಪ್ಪಿಸುತ್ತಿದ್ದ ಕಾರಣಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಓಲಾ ಸಂಸ್ಥೆಗೆ ₹ 10 ಲಕ್ಷ ದಂಡ ವಿಧಿಸಿದೆ.
ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರ ಸೂಚನೆಯಂತೆ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿ CCPA, ಗ್ರಾಹಕರನ್ನು ವಂಚಿಸುವ ಸಂಸ್ಥೆಗಳ ವಿರುದ್ಧ ಸಮರ ಸಾರುತ್ತಲೇ ಇದ್ದು, ಇದೀಗ ಓಲಾ ಸಂಸ್ಥೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಓಲಾ ಸಂಸ್ಥೆ ರೈಡ್ಗೆ ಮುನ್ನವೇ ಮೊತ್ತ ಪಾವತಿ ಮಾಡುವಂತೆ ಗ್ರಾಹಕರನ್ನು ಒತ್ತಾಯಿಸುವ ಜತೆಗೆ ದಾರಿ ತಪ್ಪಿಸುವ ಸೂಚನೆಗಳನ್ನು ನೀಡಿದ್ದನ್ನು ಮನಗಂಡು ಗ್ರಾಹಕ ರಕ್ಷಣಾ ಪ್ರಾಧಿಕಾರ ಓಲಾ ಸಂಸ್ಥೆಗೆ ಬರೋಬ್ಬರಿ ₹10 ಲಕ್ಷ ದಂಡ ವಿಧಿಸುವ ಮೂಲಕ ಕಟ್ಟೆಚ್ಚರ ನೀಡಿದೆ.
ಓಲಾ ಸಂಸ್ಥೆ ಈ ವ್ಯವಸ್ಥೆಯನ್ನು ತಕ್ಷಣವೇ ನಿಲ್ಲಿಸುವಂತೆಯು CCPA ಆದೇಶಿಸಿದೆ. ‘ಡಾರ್ಕ್ ಪ್ಯಾಟರ್ನ್ ಹಾಗೂ ಅನಗತ್ಯ, ಅನ್ಯಾಯದ ಪದ್ಧತಿಗಳು ಮತ್ತು ದಾರಿ ತಪ್ಪಿಸುವುದರ ವಿರುದ್ಧ ಕೈಗೊಂಡ ಈ ಕ್ರಮ ಗ್ರಾಹಕರ ಹಕ್ಕು ರಕ್ಷಣೆ ಮತ್ತು ಪಾರದರ್ಶಕತೆಯಲ್ಲಿ ಮಹತ್ವದ್ದಾಗಿದೆ.
ಓಲಾ ಕಂಪನಿಯ ಪ್ರೀ-ರೈಡ್ (ಪ್ರಯಾಣಕ್ಕೂ ಮುನ್ನ) ಹಣ ಪಾವತಿಸುವ ರೀತಿ ಗ್ರಾಹಕರ ದಾರಿ ತಪ್ಪಿಸುತ್ತಿತ್ತು. ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನಿರ್ದೇಶನದ ಮೇರೆಗೆ ಕಾರ್ಯಾಚರಣೆಗೆ ಇಳಿದ CCPA ದಶ ಲಕ್ಷ ಮೊತ್ತದಂತಹ ದಂಡ ವಿಧಿಸಿದ್ದಲ್ಲದೆ, ತಕ್ಷಣವೇ ಅದನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ.
ಮೊದಲೇ ನಿಗದಿಪಡಿಸಿದ ಪ್ರಯಾಣ ದರಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಅನ್ಯ ಮಾರ್ಗ ಬಳಸಿ ಒತ್ತಾಯಿಸಕೂಡದು ಎಂದು ಕಟ್ಟುನಿಟ್ಟಿನ ಸೂಚನೆ ಸಹ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




