*ಡಿ.1 ಮತ್ತು 2ರಂದು ಬೆಳಗಾವಿಯಲ್ಲಿ ಡಿಎಸ್ಸಿ ನೇಮಕಾತಿ ರ್ಯಾಲಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸೈನಿಕರಿಗೆ ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (ಡಿಎಸ್ಸಿ)ನಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ 2026ರ ಡಿಸೆಂಬರ್ 1 ಮತ್ತು 2ರಂದು ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ.
ಭಾರತೀಯ ಸೇನೆಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ಗೆ ಸೇರಿದ ಮಾಜಿ ಸೈನಿಕರು ಹಾಗೂ ಟೆರಿಟೋರಿಯಲ್ ಆರ್ಮಿ (ಟಿಎ) ಸಿಬ್ಬಂದಿಗೆ ಮಾತ್ರ ಈ ನೇಮಕಾತಿಯಲ್ಲಿ ಭಾಗವಹಿಸಲು ಅವಕಾಶವಿದೆ. ಸೋಲ್ಜರ್ ಜನರಲ್ ಡ್ಯೂಟಿ (ಜಿಡಿ) ಮತ್ತು ಸೋಲ್ಜರ್ ಕ್ಲರ್ಕ್ (ಎಸ್ಡಿ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಸೋಲ್ಜರ್ ಜಿಡಿ ಹುದ್ದೆಗೆ ಅರ್ಜಿ ಸಲ್ಲಿಸುವ ಮಾಜಿ ಸೈನಿಕರು ನಿವೃತ್ತಿಯಾದ ದಿನಾಂಕದಿಂದ ಎರಡು ವರ್ಷಗಳ ಒಳಗಿರಬೇಕು. ಸೋಲ್ಜರ್ ಕ್ಲರ್ಕ್ ಹುದ್ದೆಗೆ ನಿವೃತ್ತಿಯಾಗಿ ಐದು ವರ್ಷಗಳ ಒಳಗಿರುವವರು ಅರ್ಹರಾಗಿರುತ್ತಾರೆ. ನೇಮಕಾತಿ ಸಂದರ್ಭದಲ್ಲಿ ಜಿಡಿ ಅಭ್ಯರ್ಥಿಗಳ ವಯಸ್ಸು 46 ವರ್ಷಗಳಿಗಿಂತ ಕಡಿಮೆ ಹಾಗೂ ಕ್ಲರ್ಕ್ ಅಭ್ಯರ್ಥಿಗಳ ವಯಸ್ಸು 48 ವರ್ಷಗಳಿಗಿಂತ ಕಡಿಮೆ ಇರಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 1ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ ವರದಿ ಮಾಡಿಕೊಳ್ಳಬೇಕು. ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




