ಪ್ರಗತಿವಾಹಿನಿ ಸುದ್ದಿ, ಮಾಂಜರಿ:
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ನದಿಗೆ ದಿಢೀರನೆ ಒಳಹರಿವು ಹೆಚ್ಚಾಗಿ ರವಿವಾರ ನಸುಕಿನ ಜಾವ ಸುಕ್ಷೇತ್ರ ಯಡೂರ-ಕಲ್ಲೋಳ ಬಾಂದಾರ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಚಿಕ್ಕೋಡಿ ತಾಲೂಕಿನಲ್ಲೂ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕೋತ್ರಾ ನದಿಗೆ ಮಹಾರಾಷ್ಟ್ರದ ನೀರು ಹರಿದು ಬರುತ್ತಿವೆ.
ಮಹಾರಾಷ್ಟ್ರದಲ್ಲಿ ಘಟ್ಟ ಪ್ರದೇಶಗಳಾದ ಕೋಯ್ನಾ, ಅಂಬಾ, ಮಹಾಬಳೇಶ್ವರಗಳಲ್ಲಿ ಮಳೆಯು ಸುರಿಯುತ್ತಿದ್ದು ನದಿಗಳಲ್ಲಿ ನೀರಿನ ಒಳಹರಿವು ಕಳೆದ ಎರಡು ಮೂರು ದಿನಗಳಿಂದ ಹೆಚ್ಚಿದ್ದರಿಂದ ನದಿ ತುಂಬಿ ಹರಿಯುತ್ತಿದ್ದು, ಇಂದು ಮುಂಜಾನೆ ಬಾಂದಾರ ಜಲಾವೃತಗೊಂಡಿದ್ದು, ಈ ಸಾಲಿನಲ್ಲಿ ಇದೇ ಮೊದಲಬಾರಿ ಬಾಂದಾರ ಜಲಾವೃತಗೊಂಡಿದೆ.
ತಾಲೂಕಿನ ಮಲಿಕವಾಡ-ದತ್ತವಾಡ, ಯಕ್ಸಂಬಾ-ದತ್ತವಾಡ, ಕಾರಗದಾ-ಭೋಜ, ಜಾತ್ರಾಟ, ಭೋಜವಾಡಿ ಮತ್ತು ಸಿದ್ನಾಳ ಬಾಂದಾರಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ರೈತರು ನದಿಗೆ ಅಳವಡಿಸಿದ ಮೋಟಾರ್ ಪಂಪಸೆಟ್ ಗಳನ್ನು ತೆಗೆಯಲು ಪರದಾಡುತ್ತಿದ್ದಾರೆ.
ಕಳೆದ ೫ ತಿಂಗಳಿಂದ ಜನತೆ ನೀರಿನ ಅಭಾವ ಮತ್ತು ಬಿಸಿಲಿನ ಧಗೆಗೆ ಬೇಸತ್ತು ಹೋಗಿದ್ದರು. ನದಿಗಳಲ್ಲಿನ ನೀರು ಬತ್ತಿ ಹೋಗಿದ್ದರಿಂದ ರೈತರಿಗೆ ಮತ್ತು ಜನ-ಜಾನುವಾರುಗಳು ತೊಂದರೆ ಅನುಭವಿಸುವ ಪ್ರಸಂಗ ಬಂದೊದಗಿತ್ತು.
ಆದರೆ ಕಳೆದ ೪-೫ ದಿನಗಳಿಂದ ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಮತ್ತು ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನದಿಗೆ ಹೊಸ ನೀರು ಬಂದಿರುವುದರಿಂದ ರೈತರಲ್ಲಿ ಸಮಾಧಾನ ತಂದಿದೆ.
ತಾಲೂಕಿನಲ್ಲಿ ಒಟ್ಟು ೧೦೩ ಗ್ರಾಮಗಳಿದ್ದು, ಇದರಲ್ಲಿನ ೩೬ ಗ್ರಾಮಗಳು ನದಿತೀರದಲ್ಲಿವೆ. ಸುಮಾರು ೫೦ ಗ್ರಾಮಗಳು ನದಿ ನೀರಿನ ಮೆಲೆ ಅವಲಂಬಿಸಿವೆ. ಜಿಲ್ಲಾಡಳಿತ ತಾಲೂಕು ಆಡಳಿತ ನದಿತೀರದಲ್ಲಿ ನಿಗಾಯಿಡುವ ಅವಶ್ಯಕತೆಯಿದೆ, ನೊಡೆಲ್ ಅಧಿಕಾರಿಗಳನ್ನು ನೇಮಕಮಾಡಬೇಕು ಎಂದು ನದಿತೀರ ಜನತೆ ಒತ್ತಾಯಿಸಿದ್ದಾರೆ
ಕೃಷ್ಣಾ ನದಿಗೆ ನೀರು ಹೆಚ್ಚಾಗಿರುವುದರಿಂದ ಇಂದು ಮುಂಜಾನೆ ತಹಶಿಲ್ದಾರ ಚಿದಂಬರ ಕುಲಕರ್ಣಿ ಭೇಟಿಯಾಗಿ ನದಿನೀರಿನ ಮಟ್ಟ ಪರಿಶೀಲಿಸಿ ಮುಂಜಾಗೃತೆ ಕ್ರಮವಾಗಿ ಸೇತುವೆ ಮೇಲಿನಿಂದ ಯಾರುೂ ಸಂಚರಿಸಬಾರದೆಂದು ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ