Belagavi NewsBelgaum NewsKannada NewsKarnataka NewsLatest

ಖಾನಾಪುರದಲ್ಲಿ ಭಾರೀ ಮಳೆ: ಹಲವೆಡೆ ಸಂಪರ್ಕ ಕಡಿತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಭಾನುವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ
ಕಾನನದಂಚಿನ ಗ್ರಾಮಗಳಿಗೆ ಸಂಪರ್ಕ ರಸ್ತೆ, ವಿದ್ಯುತ್ ಸಂಪರ್ಕ ಕಡಿತ ಸೇರಿದಂತೆ ಹಲವು
ಸಮಸ್ಯೆಗಳನ್ನು ಸೃಷ್ಟಿಸಿದೆ. ಸತತಧಾರೆಯ ಪರಿಣಾಮ ತಾಲ್ಲೂಕಿನ ನಾಗರಗಾಳಿ, ಗುಂಜಿ,
ಲೋಂಡಾ, ಹೆಮ್ಮಡಗಾ, ನೇರಸೆ, ನೀಲಾವಡೆ, ಜಾಂಬೋಟಿ ಮತ್ತು ಕಣಕುಂಬಿ ಅರಣ್ಯಪ್ರದೇಶದ
50ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳ ಮೇಲೆ
ನೀರು ಹರಿಯುತ್ತಿರುವ ಕಾರಣ ಈ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿದುಕೊಂಡಿದೆ. ಸತತವಾಗಿ
ಸುರಿಯುತ್ತಿರುವ ಮಳೆ ಮತ್ತು ರಭಸದಿಂದ ಬೀಸುತ್ತಿರುವ ಗಾಳಿ ಜನಜೀವನವನ್ನು
ಅಸ್ತವ್ಯಸ್ತಗೊಳಿಸಿದೆ.
ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ,
ಪಾಂಡರಿ ಮತ್ತು ಮಹದಾಯಿ ನದಿಗಳು, ಕಳಸಾ, ಭಂಡೂರಿ, ಕೋಟ್ನಿ, ಮಂಗೇತ್ರಿ, ಪಣಸೂರಿ,
ತಟ್ಟೀ, ಕುಂಭಾರ, ಬೈಲ್ ಮತ್ತಿತರ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ.
ಕಂದಾಯ ಇಲಾಖೆಯ ಮಾಹಿತಿಯಂತೆ ಮಂಗಳವಾರದವರೆಗೆ ತಾಲ್ಲೂಕಿನ ಕಣಕುಂಬಿಯಲ್ಲಿ 7.8
ಸೆಂ.ಮೀ, ಲೋಂಡಾದಲ್ಲಿ 3.6 ಸೆಂ.ಮೀ, ಗುಂಜಿಯಲ್ಲಿ 5.3 ಸೆಂ.ಮೀ, ಜಾಂಬೋಟಿಯಲ್ಲಿ 4.5
ಸೆಂ.ಮೀ, ಅಸೋಗಾದಲ್ಲಿ 3.3 ಸೆಂ.ಮೀ, ಖಾನಾಪುರ, ನಾಗರಗಾಳಿ, ಬೀಡಿ, ಕಕ್ಕೇರಿ ಹಾಗೂ
ಇತರೆ ಭಾಗಗಳಲ್ಲಿ ಸರಾಸರಿ 2.5 ಸೆಂ.ಮೀ ಗಳಷ್ಟು ಮಳೆಯಾಗಿದೆ.
ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆ ಭತ್ತ, ರಾಗಿ, ಶೇಂಗಾ, ಗೆಣಸು ಮತ್ತು
ಆಲೂಗಡ್ಡೆ ಮತ್ತಿತರ ಫಸಲುಗಳಿಗೆ ಅನುಕೂಲ ಕಲ್ಪಿಸಲಿದೆ. ಕಳೆದ ಮೂರು ದಿನಗಳಿಂದ ಉತ್ತಮ
ಮಳೆ ಸುರಿದಿದ್ದರಿಂದ ಭತ್ತದ ಗದ್ದೆಗಳಲ್ಲಿ ನೀರು ಶೇಖರಣೆಯಾಗಿದೆ. ಬಿಟ್ಟೂಬಿಡದೇ
ಸುರಿಯುತ್ತಿರುವ ಮಳೆಯ ನಡುವೆಯೂ ತಾಲ್ಲೂಕಿನ ಗ್ರಾಮೀಣ ಭಾಗದ ರೈತರ ಹೊಲಗಳಲ್ಲಿ ರಾಗಿ
ಮತ್ತು ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆ.

ಸೇತುವೆಗಳು ಜಲಾವೃತ
ಪಾಂಡರಿ ಮತ್ತು ಮಲಪ್ರಭಾ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಮಳೆಯ
ರೌದ್ರನರ್ತನಕ್ಕೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳು
ಜಲಾವೃತಗೊಂಡಿವೆ. ತಾಲ್ಲೂಕಿನ ಕಣಕುಂಬಿ, ಜಾಂಬೋಟಿ, ಲೋಂಡಾ ಮತ್ತು ಭೀಮಗಡ
ಅರಣ್ಯಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಸಂಪರ್ಕ ಸೇತುವೆಗಳ ಮೇಲೆ
ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ
ದಾರೋಳಿ-ಮೋದೆಕೊಪ್ಪ, ಕುಸಮಳಿ-ಜಾಂಬೋಟಿ, ಅಸೋಗಾ-ಭೋಸಗಾಳಿ, ಅಮಟೆ-ಗೋಲ್ಯಾಳಿ,
ಲೋಂಡಾ-ವರ್ಕಡ, ಹೆಮ್ಮಡಗಾ-ತಳೇವಾಡಿ, ನೇರಸಾ-ಕೊಂಗಳಾ, ಗವ್ವಾಳಿ,
ಅಬನಾಳಿ-ಡೊಂಗರಗಾಂವ, ಶಿರೋಲಿ-ತಿವೋಲಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ಕೌಲಾಪುರ
ಗ್ರಾಮಗಳ ನಡುವಿನ ಸೇತುವೆಗಳ ಮೇಲೆ ಐದಾರು ಅಡಿಗಳಷ್ಟು ನೀರು ಹರಿಯುತ್ತಿದೆ. ನದಿ,
ಹಳ್ಳ-ಕೊಳ್ಳಗಳ ಸೇತುವೆಗಳ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಚಾರದಲ್ಲಿ
ವ್ಯತ್ಯಯ ಉಂಟಾಗಿದೆ.

ದೇವಾಲಯಗಳು ಜಲಾವೃತ: ಧರೆಗುರುಳಿದ ಮರಗಿಡಗಳು
ತಾಲ್ಲೂಕಿನ ಜಾಂಬೋಟಿ ಅರಣ್ಯದ ಹಬ್ಬನಹಟ್ಟಿ ಆಂಜನೇಯ ದೇವಾಲಯ ಮತ್ತು ಇಟಗಿಯ ಮರುಳಶಂಕರ
ದೇವಾಲಯಗಳು ಸೋಮವಾರ ಸಂಜೆ ಮಲಪ್ರಭಾ ನದಿಯಲ್ಲಿ ಮುಳುಗಡೆಯಾಗಿವೆ. ಜೋರಾದ ಮಳೆ ಮತ್ತು
ಮಳೆಯ ಜೊತೆ ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಅಲ್ಲಲ್ಲಿ ಮರಗಿಡಗಳು ಮತ್ತು
ವಿದ್ಯುತ್ ತಂತಿಗಳು ಬಿದ್ದು ಹಾನಿ ಉಂಟಾಗಿದೆ. ಪಟ್ಟಣದ ಮಲಪ್ರಭಾ ನದಿತೀರದ ಸೇತುವೆ
ಮೇಲೆ ಮರವೊಂದು ಬುಡಸಮೇತ ಉರುಳಿಬಿದ್ದಿದ್ದರಿಂದ ಮಂಗಳವಾರ ಮಧ್ಯಾಹ್ನ ಬೆಳಗಾವಿ-ಪಣಜಿ
ಹೆದ್ದಾರಿಯಲ್ಲಿ 2 ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಮತ್ತು
ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಮರ ಕತ್ತರಿಸಿ ಅವಶೇಷಗಳನ್ನು ತೆರವುಗೊಳಿಸುವ
ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button