Kannada NewsKarnataka NewsLatestPolitics

*ಡಿಸಿಎಂ ಬೈಕ್ ರೈಡ್ ಗೆ ಸಿಎಂ ಗ್ರೀನ್ ಸಿಗ್ನಲ್ ತೋರೋ ಮೂಲಕ ಹೆಬ್ಬಾಳ ನೂತನ ಮೇಲ್ಸೇತುವೆ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಡಿ.ಕೆ. ಶಿವಕುಮಾರ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಯಜ್ಡಿ ಬೈಕ್ ಚಾಲನೆಗೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರುವ ಮೂಲಕ ಹೆಬ್ಬಾಳ ನೂತನ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಿದರು.

ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಬಿಡಿಎ ವತಿಯಿಂದ ನಿರ್ಮಿಸಲಾಗಿರುವ ಹೆಬ್ಬಾಳ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಮೊದಲು ಟೇಪ್ ಕತ್ತರಿಸಿ, ನಂತರ ಡಿಸಿಎಂ ಬೈಕ್ ರೈಡ್ ಗೆ ಹಸಿರು ಬಾವುಟ ತೋರಿ ಉದ್ಘಾಟಿಸಿದರು.

Home add -Advt

ಈ ಸಂದರ್ಭದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿ.ಡಿ.ಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಮಾಜಿ ಸಂಸದೆ, ನಟಿ ರಮ್ಯಾ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿ.ಡಿ.ಎ. ಕಮಿಷನರ್ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ ಮಹೇಶ್ವರರಾವ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

ಬೈಕ್ ಪ್ರೇಮಿ ಡಿ.ಕೆ. ಶಿವಕುಮಾರ್ ಅವರು ಕಾಲೇಜು ದಿನಗಳಲ್ಲಿ ಅಂದರೆ ಪದವಿ ವ್ಯಾಸಂಗ ಮಾಡುವಾಗ 10,400 ರೂ. ಗೆ ಸಿಎಇ 7684 ಸಂಖ್ಯೆಯ ಯಡ್ಜಿ ಬೈಕ್ ಖರೀದಿಸಿದ್ದರು. ಕಾಲೇಜು ದಿನಗಳಲ್ಲಿ ಬಳಸಿದ್ದ ಈ ಬೈಕ್ ಅನ್ನು ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಬೆಂಗಳೂರಿನ ಹಳೆಯ ಬೈಕ್‌ ನವೀಕರಣ ಮಾಡುವ ಯುವಕ ಸುಪ್ರೀತ್ ಅವರು ರೀ ಕಂಡೀಷನಿಂಗ್ ಮಾಡಿದ್ದರು. ಈಗ ತಮ್ಮ ನೆಚ್ಚಿನ ಬೈಕ್ ಅನ್ನು ಹೆಬ್ಬಾಳ ಮೇಲ್ಸೇತುವೆ ಮೇಲೆ ಸೋಮವಾರ ಓಡಿಸಿದರು. ಅವರ ಅಭಿಮಾನಿಗಳು ಜೋರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದರು.

ಹೆಬ್ಬಾಳ ಮೇಲ್ಸೇತುವೆ 700 ಮೀ. ಉದ್ದದ ಲೂಪ್ ರಸ್ತೆಯಾಗಿದ್ದು, 2023ರಲ್ಲಿ ಇದರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ರೂ.80 ಕೋಟಿ ವೆಚ್ಚದಲ್ಲಿ ಈ ಮೇಲ್ಸೆತುವೆ ನಿರ್ಮಾಣ ಮಾಡಲಾಗಿದ್ದು, ಇದರಿಂದ ಶೇ. 30 ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾಯೋಗಿಕ ಸಂಚಾರ ಮಾಡುವ ಮೂಲಕ ಪರೀಕ್ಷೆ ಮಾಡಿದ್ದರು.

Related Articles

Back to top button