Kannada NewsKarnataka NewsLatest

*ಹೀಗೊಂದು ಅದ್ಭುತ ಪ್ರಸಂಗ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಅ.25ರಂದು ಹೆಗಡೆಕಟ್ಟಾ ಅಪರೂಪದ ಪ್ರಸಂಗವೊಂದಕ್ಕೆ ಸಾಕ್ಷಿಯಾಯಿತು. ಪ್ರಸಂಗ ಅಂದರೆ ಗೊತ್ತಲ್ಲ, ತಾಳ ಮದ್ದಳೆ ಕಾರ್ಯಕ್ರಮ.


ಮರಿಯಜ್ಜನ್ ಮನೆಯವರ ಪ್ರಾಯೋಜಕತ್ವದಲ್ಲಿ, ಯಕ್ಷ ಕೌಮುದಿ ಟ್ರಸ್ಟ್ (ರಿ) ಶ್ರೀರಂಗ ಪಟ್ಟಣ ಇವರು ಆಯೋಜಿಸಿದ್ದ ‘ಸೀತಾಪಹಾರ’ ಪ್ರಸಂಗ. ಇಲ್ಲಿನ ಸುವರ್ಣ ಸುರಭಿ ಸಭಾಂಗಣದಲ್ಲಿ ನಡೆಯಿತು.

ಕೊಳಗಿ ಕೇಶವ ಹೆಗಡೆಯವರ ಹಳೆಯ ಮಟ್ಟಿನ ಭಾಗವತಿಕೆಗೆ ಯಲ್ಲಾಪುರ ಶಂಕರ ಭಾಗವತರ ಮದ್ದಳೆ ಮತ್ತು ಪ್ರಸನ್ನ ಹೆಗ್ಗಾರರ ಚಂಡೆಯ ಮೇಳವಿಕೆ ತುಂಬಾ ಚೆನ್ನಾಗಿತ್ತು.

ರಾವಣನಾಗಿ ಅರ್ಥ ಹೇಳಿದ ಜಬ್ಬಾರ್ ಸುಮೋ ಸಂಪಾಜೆಯವರು ಭಾವಪೂರ್ಣ ಅರ್ಥಗಾರಿಕೆ, ಶಬ್ಧಗಳ ಕಟ್ಟೋಣದಿಂದ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟರು ಎಂಬುದಕ್ಕೆ ಎರಡು ಮಾತಿಲ್ಲ. ಧ್ವನಿಯ ಏರಿಳಿತ, ಪದ ಹೇಳುವಾಗ ಸೂಕ್ತವಾದ ಭಾವಾಭಿನಯ ಇವೆಲ್ಲ ಪ್ರಸಂಗ ಕೇಳುವುದಕ್ಕೂ, ನೋಡುವುದಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟ ಪಡಿಸುವಂತೆ ಇತ್ತು.

ಮಾರೀಚನಾಗಿ ವಿ. ಉಮಾಕಾಂತ ಭಟ್ಟ ಕೆರೆಕೈ ಇವರು ಹಾಸ್ಯಮಯವಾಗಿಯೇ ಮಾತಿಗೆ ಮಾತನ್ನು ಹೆಣೆದು ರಾವಣನಿಗೆ ಸಮದಂಡಿಯಾಗಿ ಪಾತ್ರ ಪೋಷಣೆ ಮಾಡಿ ರಂಜಿಸಿದರು.


ರಾಮನಾಗಿ ಗ. ನಾ. ಭಟ್ಟ ಶ್ರೀರಂಗ ಪಟ್ಟಣ (ಓಣಿಕೈ) ಇವರು ವೇದಾಂತದ ಹೊಳಹುಗಳನ್ನು ತಮ್ಮ ಮಾತುಗಳಲ್ಲಿ ತುಂಬಿ ಮನಸೂರೆಗೊಂಡರು.


ಸೀತೆಯಾಗಿ ಅರ್ಥ ಹೇಳಿದ ಗಣರಾಜ ಕುಂಬ್ಳೆಯವರು ಸಂದರ್ಭಕ್ಕೆ ತಕ್ಕ ಭಾವಗಳನ್ನು ತಮ್ಮ ಮಾತುಗಳಲ್ಲಿ ಬಿಂಬಿಸಿದರು. ರಾಮ, ಲಕ್ಷ್ಮಣ ಮತ್ತು ರಾವಣ ಈ ಮೂರೂ ಪಾತ್ರಗಳ ಜೊತೆಗಿನ ಸಂಭಾಷಣೆಯನ್ನೂ ಸಮರ್ಥವಾಗಿ ನಿರ್ವಹಿಸಿದರು.


ಲಕ್ಷ್ಮಣನಾಗಿ ಮಿಂಚಿದ ಮಹೇಶ ಭಟ್ಟ ಇಡಗುಂದಿ ಇವರು ತಮ್ಮ ಗಂಭೀರ ಧ್ವನಿ ಮತ್ತು ಸ್ಪಷ್ಟವಾದ ವಿಚಾರ ಮಂಡನೆಯಿಂದ ಸಿಕ್ಕ ಕಡಿಮೆ ಅವಕಾಶವನ್ನೇ ಚೆನ್ನಾಗಿ ಬಳಸಿಕೊಂಡರು.


ಆರಂಭದಲ್ಲಿ ಸಂಘಟಕರ ಪರವಾಗಿ ಮಧುಸೂದನ ಹೆಗಡೆ ಮರಿಯಜ್ಜನ ಮನೆಯವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಕಲಾವಿದರನ್ನು ಸನ್ಮಾನಿಸಿದರು.


ಕೊನೆಯಲ್ಲಿ ಯಕ್ಷ ಕೌಮುದಿಯ ಗ. ನಾ. ಭಟ್ಟರು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿ ಸಂಘಟಕರಿಗೆ ನೆನಪಿನ ಕಾಣಿಕೆ ನೀಡಿದರು.


ಹೆಗಡೆಕಟ್ಟಾ ಭಾಗದಲ್ಲಿ ಬಹಳ ದಿನಗಳ ನಂತರ ಸಂಘಟನೆಗೊಂಡಿದ್ದ ತಾಳಮದ್ದಳೆ ದೀರ್ಘ ಸಮಯದವರೆಗೆ ನೆನಪಿನಲ್ಲಿ ಇರುವಂತೆ ಆಯಿತು.
ಸುವರ್ಣ ಸುರಭಿಯ ನಿರ್ಮಾಣದಲ್ಲಿ ತುಂಬಾ ಆಸ್ಥೆವಹಿಸಿದ ಮಧುಸೂದನ ಹೆಗಡೆ ಮತ್ತು ಮನೆಯವರು ಇಂತಹ ಒಂದು ಕಾರ್ಯಕ್ರಮದ ಮೂಲಕ ಸಭಾ ಭವನದ ಬಳಕೆಗೂ ಶ್ರೀಕಾರ ಹಾಕಿದ್ದನ್ನು ಮೆಚ್ಚಲೇ ಬೇಕು.


ಹೈಸ್ಕೂಲ್ ಕಾರ್ಯಕ್ರಮದ ಹೊರತಾಗಿ ಸುವರ್ಣ ಸುರಭಿಯಲ್ಲಿ ನಡೆದ ಮೊದಲ ಕಾರ್ಯಕ್ರಮ ಬಹುಶಃ ಇದೇ ಇರಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button