ಮಾನಸಿಕ ಸ್ಥೈರ್ಯ ತುಂಬಿ ಆರ್ಥಿಕ ನೆರವು ನೀಡಿದ ಹವ್ಯಕ ಮಂಡಳಿ ಪ್ರಮುಖರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಸಂಕಷ್ಟದಲ್ಲಿರುವವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿರುವ ವಾರಿಯರ್ಸ್ ಗಳನ್ನು ಭೇಟಿ ಮಾಡಿದ ಬೆಳಗಾವಿ ಹವ್ಯಕ ಮಂಡಳದ ಪ್ರಮುಖರು, ವಿಶ್ವಹಿಂದುಪರಿಷತ್, ಸೇವಾಭಾರತಿ ಹಾಗೂ ಭಜರಂಗದಳ ಸಂಯುಕ್ತವಾಗಿ ನಡೆಸುತ್ತಿರುವ ಸೇವಾ ಕೇಂದ್ರಕ್ಕೆ 1.51 ಲಕ್ಷ ರೂ. ದೇಣಿಗೆ ನೀಡಿದರು.
ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಹವ್ಯಕ ಸಮಾಜದವರು 3 ಲಕ್ಷ ರೂ.ಗಳಿಗಿಂತ ಹೆಚ್ಚು ವಂತಿಗೆಯನ್ನು ಸೇವಾಭಾರತಿ ಸಂಸ್ಥೆ ಮೂಲಕ ನೀಡಿದ್ದರು. ಈ ಬಾರಿ ವಿಶ್ವಹಿಂದುಪರಿಷತ್, ಸೇವಾಭಾರತಿ ಹಾಗೂ ಭಜರಂಗದಳ ಸಂಯುಕ್ತವಾಗಿ ಬೆಳಗಾವಿ ಜನತೆಗೆ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ನೀಡುತ್ತಿರುವ ಸೇವೆಯನ್ನು ವಿಶ್ವಹಿಂದೂ ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್ ಮೂಲಕ ತಿಳಿದು ಅವರ ನೆರವಿಗೆ ಹವ್ಯಕ ಮಂಡಳಿ ಪ್ರಮುಖರು ಮುಂದಾದರು.
ಸೊಂಕೀತರ ಶುಶ್ರುಷಾ ಕೇಂದ್ರ, ಕ್ವಾರಂಟೈನ್ ಸೇವಾಕೇಂದ್ರ, ಅಂಬ್ಯುಲೆನ್ಸ್ ಸೇವೆ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಈವರೆಗೆ ಅಹೋರಾತ್ರಿ 250ಕ್ಕೂ ಹೆಚ್ಚು ಶವಸಂಸ್ಕಾರ ಸೇವೆ ಮಾಡಿದ್ದಾರೆ. ವಯಕ್ತಿಕ ಆರೋಗ್ಯ ಹಾಗೂ ಜೀವದ ಹಂಗುತೊರೆದು ಕಳೆದ 20 ದಿನಗಳಿಂದ ಹೋರಾಡುತ್ತಿರುವ ಸೇವಾಕರ್ತರ ಸೇವೆ ಬೆಲೆಕಟ್ಟಲಾಗದ್ದು. ಮುಂಚೂಣಿಯಲ್ಲಿ ನಿಂತು ನೊಂದವರ ಸಹಾಯಕ್ಕೆ ಧಾವಿಸುತ್ತಿರುವ ಕಾರ್ಯಕರ್ತರನ್ನು ಇಂದು ಬೆಳಿಗ್ಗೆ ಹವ್ಯಕ ಪ್ರಮುಖರು ಭೇಟಿಯಾಗಿ ಪ್ರೋತ್ಸಾಹಿಸಿ, ಕೃತಜ್ಞತೆ ಸಲ್ಲಿಸಿದರು.
ಹವ್ಯಕ ಮಂಡಳದ ಪ್ರಮುಖರಾದ ಭಾಸ್ಕರ್ ಕಡೇಕೋಡಿ, ಶ್ರೀಧರ ಗುಮ್ಮಾನಿ, ಶಾಂತಾ ಹೆಗಡೆ, ಅನಂತ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಂತಾಹೆಗಡೆ, ಧನಸಹಾಯ ಮಾಡಬಹುದು, ಆದರೆ ನಮ್ಮ ನೆರೆಹೊರೆಯವರು ಮೃತರಾದಾಗ ಬಂದು ಮುಂದೆ ನಿಂತು ದಿಕ್ಕುತೋಚದ ಸಂದರ್ಭದಲ್ಲಿ ಮಾಡಿದ ಸಹಾಯ ಮುಖ್ಯವಾದದ್ದು. ಈ ಸೇವೆಯನ್ನು ನೋಡಿ ಜನ ತಾವಾಗಿಯೇ ಮುಂದೆಬಂದು ಕೈಜೋಡಿಸಿದ್ದಾರೆ. ಅಂಥವರಿಗೆಲ್ಲ ಸೇವಾ ಅವಕಾಶವನ್ನು ಕಲ್ಪಿಸಿದ ಸಂಘ ಪರಿವಾರಕ್ಕೆ ಧನ್ಯವಾದ ಎಂದು ತಿಳಿಸಿದರು.
ಸಂಘ ಪರಿವಾದ ಪದಾಧಿಕಾರಿಗಳ ಸಮ್ಮುಖದಲ್ಲಿ 1,51,000 ರೂ. ಗಳನ್ನು ಮೋದಿ ಬಿಲ್ಡಿಂಗನಲ್ಲಿನ ಸೇವಾಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಸೇವಾಭಾರತಿ ನಗರ ಸಂಯೋಜಕ ರೋಹಿತ್ ದೇಶಪಾಂಡೆ, ಆರ್ ಎಸ್ ಎಸ್ ನಗರ ಸಂಪರ್ಕ ಪ್ರಮುಖ .ಗುರುದತ್ತ ಕುಲಕರ್ಣಿ, ವಿಶ್ವ ಹಿಂದು ಪರಿಷತ್ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ವಿದ್ಯಾಭಾರತಿ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ವಿಶ್ವಹಿಂದೂ ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಅಚ್ಯುತ ಕುಲಕರ್ಣಿ, ವಿಶ್ವಹಿಂದೂ ಪರಿಷತ್ ನಗರ ಅಧ್ಯಕ್ಷ ಡಾ ಭಾಗೋಜಿ, ಜಿಲ್ಲಾ ಕಾರ್ಯದರ್ಶಿ ವಿಜಯ ಜಾಧವ, ಬಜರಂಗದಳದ ನಗರ ಸಂಯೋಜಕ ಆದಿನಾಥ ಗಾವಡೆ ಹಾಗೂ ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ