ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕಷ್ಟದಲ್ಲೂ ಎಲ್ಲರ ಒಳಿತನ್ನೇ ಬಯಸಿದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ
ಅವರ ಜೀವನಾದರ್ಶ ಎಲ್ಲ ಮಹಿಳೆಯರಿಗೆ ಮಾದರಿಯಾಗಿದೆ. ಅವರು ತಾಳ್ಮೆ, ಸಹನೆಯ ಸ್ಫೂರ್ತಿಯಾಗಿದ್ದರು ಎಂದು ಯರಹಳ್ಳಿಯ ರೆಡ್ಡಿ ಗುರುಗಳಾದ ವೇಮನಾನಂದ ಸ್ವಾಮಿಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ಮೇ ೧೦ ರಂದು ಸದಾಶಿವ ನಗರದ ರೆಡ್ಡಿ ಭವನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಸಹನಾ ಮೂರ್ತಿ. ಭೂಮಿಗೆ ಮಹಿಳೆಯನ್ನು ಹೋಲಿಸಲಾಗುತ್ತದೆ. ಕರುಣಾಮಯಿ ಹೆಣ್ಣು ವಿಶ್ವವನ್ನು ಪೊರೆಯುವ ತಾಯಿಯಂತೆ ಅಂತಃ ಸ್ವರೂಪಿಯಾಗಿ ಮಲ್ಲಮ್ಮ ಅವತರಿಸಿದ್ದರು ಎಂದರು.
ವಿಶೇಷ ಉಪನ್ಯಾಸ ನೀಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ಸಮಾಜ ಮುಖಿಯಾಗುವುದರ ಜೊತೆಗೆ ಜೀವನಮುಖಿಯಾಗಿ ಬದುಕಬೇಕು. ನೂರಾರು ಸಾವಿರಾರು ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಬದುಕು. ಅದನ್ನು ಮಲ್ಲಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸಿ.ಬಿ. ರಂಗಯ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ೨೦೧೮-೧೯ ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಂದಿರಾ ಭೀಮರೆಡ್ಡಿ, ಪೊಲೀಸ್ ಉಪ ಆಯುಕ್ತ ಯಶೋಧಾ ವಂಟಗೋಡಿ, ಬೆಳಗಾವಿ ರೆಡ್ಡಿ ಸಂಘದ ಉಪಾಧ್ಯಕ್ಷ ಬಿ.ಎನ್ ಬಾವಲತ್ತಿ, ಎಸಿಪಿ ನಾರಾಯಣ ಭರಮನಿ, ಶ್ರೀಕಾಂತ ಜಾಲಿಕಟ್ಟಿ ಸೇರಿದಂತೆ ರೆಡ್ಡಿ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಸುರೇಶ ಚಂದರಗಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಬೆಳಗಾವಿ ರೆಡ್ಡಿ ಸಂಘದ ಉಪಾಧ್ಯಕ್ಷ ಬಿ.ಎಸ್. ನಾಡಗೌಡರ ಪರಿಚಯಿಸಿದರು.
ಹೇಮಾ ಪಾಟೀಲ ಹಾಗೂ ಶಶಿಕಲಾ ನಾಡಗೌಡ ನಿರೂಪಿಸಿದರು. ನೆಹರು ಯುವ ಕೇಂದ್ರದ ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ