Belagavi NewsBelgaum NewsKarnataka NewsPolitics

*200 ಕೋಟಿ ವೆಚ್ಚದಲ್ಲಿ ಯಲ್ಲಮ್ಮನಗುಡ್ಡದಲ್ಲಿ ಹೈಟೆಕ್ ಅಭಿವೃದ್ಧಿ: ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ 200 ಕೋಟಿ ರೂ. ಗಳಲ್ಲಿ ಹೈಟೆಕ್ ಅಭಿವೃದ್ದಿಯನ್ನು ಮಾಡಲು ಯೋಜನೆ ರೂಪಿಸಿದ್ದು, ಮುಂದಿನ ಅಧಿವೇಶನ ಮುಗಿದ ನಂತರ ಈ ಯೋಜನೆಗೆ ತಕ್ಷಣ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸವದತ್ತಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಯ ದೃಷ್ಟಿಕೋನದಲ್ಲಿ ವಿಶೇಷ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್‌.ಕೆ.ಪಾಟೀಲರು ದೇವಸ್ಥಾನದ ಅಭಿವೃದ್ಧಿಗೋಸ್ಕರ ವಿಶೇಷ ಕಾಳಜಿ ವಹಿಸಿದ್ದು, ಬರುವಂತ ದಿನಗಳಲ್ಲಿ ಯಲ್ಲಮ್ಮ ದೇವಸ್ಥಾನ ಮಾದರಿ ದೇವಸ್ಥಾನವಾಗಿ ಹೊರಹೊಮ್ಮಲಿದೆ ಎಂದರು.

ದೇವೇಗೌಡರ ಅವಧಿಯಲ್ಲಿ ಸವದತ್ತಿಗೆ ರೈಲ್ವೆ ಮಾರ್ಗ ನಿರ್ಮಿಸಲು ಸರ್ವೆ ಮಾತ್ರ ಮಾಡಲು ಸೂಚಿಸಲಾಗಿದ್ದು, ಈ ಭಾಗದಲ್ಲಿ ರೈಲ್ವೆ ಮಾರ್ಗ ನಿರ್ಮಿಸುವ ಕುರಿತು ಇಲ್ಲಿಯವರೆಗೆ ಯಾವುದೇ ಅನುಮೋದನೆ ಸಿಕ್ಕಿಲ್ಲ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ರೈಲ್ವೆ ಯೋಜನೆಗಳು ಇನ್ನು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದ್ದು, ಅವುಗಳು ಪರಿಪೂರ್ಣಗೊಂಡ ನಂತರ ಅವಶ್ಯಗತೆಗನುಗುಣವಾಗಿ ಸವದತ್ತಿ ಮಾರ್ಗವಾಗಿ ರೈಲ್ವೆ ಯೋಜನೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

ಸವದತ್ತಿಯಲ್ಲಿ ಯಾವುದಾದರೊಂದು ಕೈಗಾರಿಕೆಯನ್ನು ಪ್ರಾರಂಭಿಸಬೇಕೆಂಬ ಬೇಡಿಕೆ ಇದ್ದು, ಶಾಸಕ ವಿಶ್ವಾಸ ವೈದ್ಯರವರು ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಕನಿಷ್ಠ 50 ಎಕರೆ ಜಾಗವೇನಾದರೂ ಸಿಕ್ಕಲ್ಲಿ ಧಾರವಾಡ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕೆಲವು ಕೈಗಾರಿಕೆಗಳನ್ನು ಸವದತ್ತಿಯಲ್ಲಿ ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು.

ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಪೂಜಾರ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಪ.ಜಾತಿ ಮತ್ತು ಪ.ಪಂಗಡದವರಿಗೆ ವಾಸಿಸಲು ನೀಡಿರುವ ಖುಲ್ಲಾ ಜಾಗದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಎನ್.ಮುತ್ತಿನ ನ್ಯಾಯಾಲಯದ ಆವರಣದ ಪಕ್ಕದಲ್ಲಿ ನೀರಾವರಿ ಇಲಾಖೆಯ ಖುಲ್ಲಾ ಜಾಗವನ್ನು ನ್ಯಾಯವಾದಿಗಳಿಗೆ ಇ- ಗ್ರಂಥಾಲಯ ಸ್ಥಾಪಿಸಲು ಮತ್ತು ವಾಹನ ನಿಲುಗಡೆಗೆ ಅನುಕೂಲ ಕಲ್ಪಿಸಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂರ್ಭದಲ್ಲಿ ಅಶ್ವತ ವೈದ್ಯ, ಉಮೇಶ ಬಾಳಿ, ಚಂದ್ರು ಜಂಬ್ರಿ, ಕೆ.ಕೆ.ಪುಣೇದ, ಬಸವರಾಜ ಗುರಣ್ಣವರ, ಡಿ.ಡಿ. ಟೋಪೋಜಿ, ಮಲ್ಲಿಕಾರ್ಜುನ ಬೇವೂರ, ಚಂದ್ರಣ್ಣ ಶಾಮರಾಯನವರ, ಸುರೇಶ ಬಡಗಿಗೌಡರ, ಬಿ.ಎನ್.ಪ್ರಭುನವರ, ಜಿ.ಜಿ.ಕಣವಿ, ರಾಘವೇಂದ್ರ ಪೂಜಾರ, ಬೋಪಾಲ ಬಾಂಡೇಕರ, ಎಫ್.ಎಸ್‌.ಗಾಜಿ, ಸೋಮಯ್ಯ, ವಡಿಯರ, ಸಂತೋಷ ನರಿಯವರ, ಪ್ರವೀಣ ರಾಮಪ್ಪನವರ, ರಾಮಚಂದ್ರ, ಕಣವಿ, ಬಿ.ಟಿ.ಆಯಟ್ಟಿ ಇತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button