*ಘಟಪ್ರಭಾ ನದಿಗೆ ಏಪ್ರೀಲ್ 1 ರಿಂದ 2.5 ಕ್ಯೂಸೆಕ್ಸ್ ನೀರು ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ ಏಪ್ರೀಲ್ 1ರಿಂದ 2.5 ಟಿಎಂಸಿ ನೀರು ಹರಿಬಿಡಲಾಗುತ್ತದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಿಕಲ್ ಜಲಾಶಯದದಿಂದ ಘಟಪ್ರಭಾ ಬಲದಂಡೆ ಜೆ.ಆರ್.ಬಿ.ಎಸ್. ಚಿಕ್ಕೋಡಿ ಉಪ (ಸಿಬಿಎಸ್) ಹಾಗೂ ಮಾರ್ಕೆಂಡೆ ಕಾಲುವೆಗಳಿಗೆ ದಿನಾಂಕ ಏಪ್ರೀಲ್ 10 ರಿಂದ 20 ವರೆಗೆ ಒಟ್ಟು 10 ದಿನಗಳ ಕಾಲ ಹಾಗೂ ಘಟಪ್ರಭಾ ಎಡದಂಡೆ ಜಿ.ಎಲ್.ಬಿ.ಸಿ ಕಾಲುವೆಗೆ ಏಪ್ರೀಲ್ 20ರಿಂದ 30 ವರೆಗೆ ಒಟ್ಟು 10 ದಿನಗಳ ಕಾಲ ನೀರನ್ನು ಕಾಲುವೆಗಳಿಗೆ ಹರಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ್ ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಹಾಗೂ ಮಳೆಯ ಕೊರತೆಯಿಂದಾಗಿ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದು, ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ ಕುಡಿಯುವ ಉದ್ದೇಶಕ್ಕಾಗಿ ಬಾಗಲಕೋಟ ಮತ್ತು ಮಾರ್ಗ ಮಧ್ಯದ ಹಳ್ಳಿಗಳಿಗೆ ಸರ್ಕಾರದ ಆದೇಶದನ್ವಯ ಕಾಯ್ದಿರಿಸಿದ 2.5 ಟಿ.ಎಂ.ಸಿ ನೀರನ್ನು ಹರಿಸಲು ಆದೇಶಿಸಿದ್ದಾರೆ. ಕೊಟ್ಟಬಾಗಿ, ಕಲ್ಮಡಿ, ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆಗಳಿಗೂ ನೀರು ಹರಿಸಲಾಗುತ್ತಿದೆ.
ನೀರು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಲು ಸಚಿವ ಸತೀಶ್ ಜಾರಕಿಹೊಳಿ ಮನವಿ:
ಹಿಡಕಲ್ ಜಲಾಶಯದಿಂದ ಘಟಪ್ರಭೆ ನದಿಗೆ, ಘಟಪ್ರಭೆ ಬಲದಂಡೆ, ಎಡದಂಡೆ ಕಾಲುವೆಗೆ ಕುಡಿಯುವ ಉದ್ದೇಶಕ್ಕಾಗಿ 2.5 ಟಿಎಂಸಿ ನೀರು ಹರಿಸಲಾಗುವುದು, ಆದರೆ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ನೀರನ್ನು ಪೋಲಾಗದಂತೆ ಸದುಪಯೋಗ ಪಡೆದುಕೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ