Belagavi NewsBelgaum News

*ಹಿಡಕಲ್‌ನಿಂದ ಧಾರವಾಡಕ್ಕೆ ನೀರು: ಸಚಿವ ಎಂ.ಬಿ. ಪಾಟೀಲ ಏಕಪಕ್ಷೀಯ ನಿರ್ಣಯವೇ?* *ಯೋಜನೆ ಕೈಬಿಡಲು ಬೆಳಗಾವಿ ಆಗ್ರಹ*

‘ನಮ್ಮ ನೀರು-ನಮ್ಮ ಹಕ್ಕು’ ಹೋರಾಟದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ

ಪ್ರಗತಿವಾಹಿನಿ ಸುದ್ದಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕೆಗಳಿಗೆ ನೀರು ಪೂರೈಸುವ ಯೋಜನೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರ ಏಕಪಕ್ಷೀಯ ನಿರ್ಣಯವೇ ಎನ್ನುವ ಸಂಶಯ ದಟ್ಟವಾಗಿದೆ.

ಅವರ ಹೇಳಿಕೆ ಇಂತಹ ಸಂಶಯಕ್ಕೆ ಕಾರಣವಾಗಿದೆ. ಯೋಜನೆ ಕುರಿತು ಮಾಹಿತಿಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ. ಈ ಕುರಿತು ಪರಿಶೀಲಿಸುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

Home add -Advt

ಆದರೆ, ಯೋಜನೆಯನ್ನು ವಿರೋಧಿಸುವುದು ಸರಿಯಲ್ಲ ಎಂದು ಎಂಂ.ಬಿ.ಪಾಟೀಲ ಹೇಳಿಕೆ ನೀಡಿದ್ದಾರೆ. ನೆರೆಹೊರೆಯವರಿಗೆ ಸಹಾಯ ಮಾಡಬೇಕು. ಸೌಹಾರ್ದ ವಾತಾವರಣ ಇರಬೇಕು. ಕೈಗಾರಿಕೆಗಳಿಗೆ ಕೇವ, 0.58 ಟಿಎಂಸಿ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳಿದ್ದಾರೆ. ಅಂದರೆ ಅವರಿಗೆ ಸಂಪೂರ್ಣ ಮಾಹಿತಿ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಅವರ ನಿರ್ದೇಶನದಂತೆ ಯೋಜನೆ ಜಾರಿಯಾಗುತ್ತಿದೆ ಎನ್ನುವ ಸಂಶಯಕ್ಕೆ ಅವರ ಹೇಳಿಕೆ ಪುಷ್ಟಿ ನೀಡುತ್ತಿದೆ.

ವಿಪರ್ಯಾಸವೆಂದರೆ, ಬೆಳಗಾವಿಯಿಂದ ಎಲ್ಲವನ್ನೂ ಕಿತ್ತುಕೊಳ್ಳುವ, ಸದಾ ಬೆಳಗಾವಿಗೆ ಅನ್ಯಾಯ ಮಾಡುವ ಹುಬ್ಬಳ್ಳಿ – ಧಾರವಾಡದ ರಾಜಕಾರಣಿಗಳಿಗೂ ನೆರೆಹೊರೆಯವರಿಗೆ ಸಹಾಯಮಾಡಬೇಕು ಎನ್ನುವ ಮನೋಭಾವ ಬೇಕಲ್ಲವೇ?

ಸಚಿವ ಎಂ.ಬಿ.ಪಾಟೀಲ ಹೇಳಿದ್ದೇನು? ಇಲ್ಲಿದೆ ಓದಿ –

ಬೆಳಗಾವಿ ವಿರೋಧ

ಹುಬ್ಬಳ್ಳಿ – ಧಾರವಾಡ ಕೈಗಾರಿಕೆಗಳಿಗೆ ಹಿಡಕಲ್ ನೀರು ಪೂರೈಸುವ ಯೋಜನೆಗೆ ಬೆಳಗಾವಿ ವಿರೋಧಿಸಿದೆ. ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದೆ.

ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುವ ಯೋಜನೆಯನ್ನು ಸರ್ಕಾರ ಕೈಬಿಡಬೇಕು’ ಎಂಬ ನಿರ್ಣಯವನ್ನು ಇಲ್ಲಿ ಗುರುವಾರ ನಡೆದ ‘ನಮ್ಮ ನೀರು-ನಮ್ಮ ಹಕ್ಕು’ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.

‘ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗಮನಕ್ಕೆ ತರದೆ, ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳಿಗೆ ನೀರು ಕೊಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಯಿತು.

ಸಭೆಯ ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ‘ಪ್ರತಿವರ್ಷ ಬೇಸಿಗೆಯಲ್ಲಿ ಬೆಳಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ನೀರಿಗಾಗಿ ಜನರು ಹಾಹಾಕಾರ ಪಡುತ್ತಾರೆ. ಕುಡಿಯುವ ಉದ್ದೇಶದ ಜತೆಗೆ, ಕೃಷಿ ಚಟುವಟಿಕೆಗಾಗಿಯೂ ನೀರು ಬೇಕಾಗುತ್ತದೆ. ಆದರೆ, ಹಿಡಕಲ್ ಜಲಾಶಯದ ನೀರನ್ನು ಕೈಗಾರಿಕೆಗಳಿಗಾಗಿ ಅನ್ಯ ಜಿಲ್ಲೆಗೆ ಪೂರೈಸುವುದಾದರೆ, ಬೆಳಗಾವಿಗರು ಬದುಕುವುದು ಹೇಗೆ’ ಎಂದು ಪ್ರಶ್ನಿಸಿದರು.

“ಕೈಗಾರಿಕೆಗೆ ನೀರು ಒದಗಿಸುವ ಯೋಜನೆಯ ಕಾಮಗಾರಿ ಆರಂಭವಾಗಿ, ಮುಕ್ತಾಯದ ಹಂತ ತಲುಪಿದೆ. ಪಕ್ಷ, ಜಾತಿ ಮತ್ತು ಭಾಷೆ ಮರೆತು, ಬೆಳಗಾವಿಯ ಎಲ್ಲ ನಾಗರಿಕರು ಒಗ್ಗಟ್ಟಿನಿಂದ ಹೋರಾಡಿದರೆ ಯೋಜನೆ ತಡೆಯಬಹುದು. ಹಾಗಾಗಿ ಎಲ್ಲರೂ ಒಂದಾಗಿ ಹೋರಾಡೋಣ. ಕೈಗಾರಿಕೆಗಳಿಗೆ ನೀರು ಒದಗಿಸುವುದನ್ನು ತಡೆಯೋಣ’ ಎಂದರು.

‘ಜನರ ಹಿತ ಕಾಯಲು ಸರ್ಕಾರ ಇದೆಯೇ ಹೊರತು, ಇಂಥ ಜನವಿರೋಧಿ ಯೋಜನೆ ಜಾರಿಗೊಳಿಸಲು ಅಲ್ಲ. ಹಾಗಾಗಿ ತಕ್ಷಣವೇ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಒತ್ತಾಯಿಸಿದರು.

‘ಇಲ್ಲಿ ನಾವು ಕೈಗೊಳ್ಳುವ ನಿರ್ಣಯಗಳನ್ನು ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದೂ ತಿಳಿಸಿದರು.

ಮಾಜಿ ಶಾಸಕ ರಮೇಶ ಕುಡಚಿ ಮಾತನಾಡಿ, ‘ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಹೇಳುತ್ತಾರೆ. ಹಾಗಾದರೆ ಟೆಂಡರ್ ಪ್ರಕ್ರಿಯೆ ಅಂತಿಮವಾಗಿ ಕಾಮಗಾರಿ ಆರಂಭವಾಗಿದ್ದು ಹೇಗೆ? ನಮ್ಮ ಜಿಲ್ಲೆಯ ಸಚಿವರಿಗೆ ಈ ಗಮನಕ್ಕೆ ಬರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಜನರ ಹಿತ ಮರೆತು, ಹಿಡಕಲ್ ಜಲಾಶಯದ ನೀರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ನಾಯಕರು ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ -ಎಂದು ಆಗ್ರಹಿಸಿದರು.

ಪರಿಸರವಾದಿ ದಿಲೀಪ್ ಕಾಮತ ಮಾತನಾಡಿ, ‘ನೆಲ, ಜಲದ ವಿಚಾರವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮಧ್ಯೆ ವಿವಾದ ನಡೆಯುತ್ತಲೇ ಇವೆ. ಈಗ ಬೆಳಗಾವಿ-ಧಾರವಾಡ ಮಧ್ಯೆ ಜಗಳ ಹಚ್ಚುವ ಕೆಲಸ ನಡೆದಿದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಇಂಥ ಯೋಜನೆ ರೂಪಿಸುತ್ತಾರೆ. ಹಾಗಾಗಿ ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧವೇ ನಾವೆಲ್ಲರೂ ಹೋರಾಟ ಮುಂದುವರಿಸೋಣ’ ಎಂದರು.

ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೆಯೇ ಈ ಯೋಜನೆ ಕೈಗೆತ್ತಿಕೊಂಡಿದ್ದು ಸರಿಯಲ್ಲ. ಬೇಕಿದ್ದರೆ ಸಚಿವ ಎಂ.ಬಿ.ಪಾಟೀಲ ಅವರು ಹಿಪ್ಪರಗಿ ಬ್ಯಾರೇಜ್‌ನಿಂದ ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗೆ ನೀರು ಕೊಡಲಿ. ಆದರೆ, ಹಿಡಕಲ್ ಜಲಾಶಯದಿಂದ ಬೇಡ’ ಎಂದು ಆಗ್ರಹಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪರಿಶಿಷ್ಟ ಹೋರಾಟಗಾರ ಮಲ್ಲೇಶ ಚೌಗಲೆ ಮಾತನಾಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಸಾಜೀದ್ ಶೇಖ್, ಮೊಹಮ್ಮದ್ ಜಹಾಂಗೀರ್ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button