
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿರುವ ಹಿಡಕಲ್ ಅಣೆಕಟ್ಟೆಯಿಂದ ಪಕ್ಕದ ಹುಬ್ಬಳ್ಳಿ- ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ನಾವು ಬಳಸುತ್ತಿರುವುದು ಕೇವಲ 0.58 ಟಿಎಂಸಿ ಅಡಿ ನೀರಷ್ಟೆ. ಈ ವಿಚಾರದಲ್ಲಿ ವಿರೋಧ ಸರಿಯಲ್ಲ. ಕೈಗಾರಿಕೆಗಳು ಬೆಳೆಯಬೇಕು ಎಂದರೆ ನೀರನ್ನು ಕೊಡಬೇಕಾದ್ದು ಸರಕಾರದ ಮೂಲಭೂತ ಕರ್ತವ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ನ್ಯಾಯಾಧೀಕರಣ ತೀರ್ಪಿನಲ್ಲಿ ಕೈಗಾರಿಕಾ ಬೆಳವಣಿಗೆ ಸಲುವಾಗಿಯೇ ಹಿಡಕಲ್ ಜಲಾಶಯದಿಂದ 4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಇದರಲ್ಲಿ ನಾವು ಕೇವಲ ಪ್ರತಿ ನಿತ್ಯ 45 ದಶ ಲಕ್ಷ ಲೀಟರ್ (0.58 ಟಿಎಂಸಿ) ನೀರು ಮಾತ್ರ ಬಳಸಲು ತೀರ್ಮಾನಿಸಿದ್ದೇವೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಜನರಿಗೆ ತೊಂದರೆ ಆಗುವಂಥ ಯಾವ ಅಂಶವೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಸರಕಾರವೇನೂ ಹಿಡಕಲ್ ಅಣೆಕಟ್ಟೆಯಿಂದ ನೀರು ಕೊಡಲು ಮುಂದಾಗಿಲ್ಲ. ಕೆಳಭಾಗದ ನದಿಯಿಂದ ಈ ನೀರನ್ನು ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ಪೂರೈಸುತ್ತೇವೆ. ನೆರೆಹೊರೆಯ ಜಿಲ್ಲೆಗಳ ಜನರ ನಡುವೆ ಪರಸ್ಪರ ಅನ್ಯೋನ್ಯತೆ ಇರಬೇಕು ಎಂದು ಅವರು ಹೇಳಿದ್ದಾರೆ.
ಹಿಡಕಲ್ ಜಲಾಶಯದಿಂದ ಈಗ ಕೃಷಿ ಭೂಮಿಗೆ ಹರಿಸುತ್ತಿರುವ ನೀರಿನ ಪ್ರಮಾಣ ಅಬಾಧಿತವಾಗಿ ಇರಲಿದೆ. ಕುಡಿಯುವ ನೀರಿಗೂ ತೊಂದರೆ ಆಗುವುದಿಲ್ಲ. ಯೋಜನೆಯ ವಿರುದ್ಧ ಮಾತನಾಡುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ