Kannada NewsKarnataka News

ಕರ್ನಾಟಕದ ಸರಕಾರ ಬಿಜೆಪಿ ಹೈಕಮಾಂಡ್ ಗೆ ಬೇಡದ ಕೂಸೆ?

ಕರ್ನಾಟಕದ ಸರಕಾರ ಬಿಜೆಪಿ ಹೈಕಮಾಂಡ್ ಗೆ ಬೇಡದ ಕೂಸೆ?

 

ಎಂ.ಕೆ.ಹೆಗಡೆ, ಬೆಳಗಾವಿ –

ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಸೆಯ ಮೇರೆಗೆ ಕರ್ನಾಟಕದಲ್ಲಿ ರಚನೆಯಾಗಿರುವ ಸರಕಾರ ಬಿಜೆಪಿ ಹೈಕಮಾಂಡ್ ಗೆ ಬೇಡವಾದ ಕೂಸೆ?

ಅಂತಹ ದಟ್ಟವಾದ ಸಂಶಯ ಮೂಡಲು ಹಲವು ಕಾರಣಗಳಿವೆ. ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಯಡಿಯೂರಪ್ಪ ಪಕ್ಷದ ಅಭಿಪ್ರಾಯ ಕಡೆಗಣಿಸಿ ಸರಕಾರ ರಚಿಸಿರುವ ಸಾಧ್ಯತೆ ಹಾಗೂ ಆ ಹಿನ್ನೆಲೆಯಲ್ಲಿ ಹೈಕಮಾಂಡ್ ಯಡಿಯೂರಪ್ಪನವರನ್ನು ಕಟ್ಟಿ ಹಾಕಲು ಯತ್ನಿಸುತ್ತಿರುವ ಸೂಚನೆಗಳು ಕಾಣುತ್ತಿವೆ.

ಸಮ್ಮಿಶ್ರ ಸರಕಾರ ಪತನಗೊಳಿಸಲು ಕೈ ಹಾಕಿ 2-3 ಬಾರಿ ವಿಫಲವಾದಾಗಲೇ ಪಕ್ಷದ ವರಿಷ್ಠರು ಯಡಿಯೂರಪ್ಪ ಮೇಲೆ ಕೆಂಗಣ್ಣು ಬೀರಿದ್ದರು. ಪಕ್ಷದ ಇಮೇಜ್ ಗೆ ಧಕ್ಕೆಯಾಗುವಂತೆ ಯಡಿಯೂರಪ್ಪ ವರ್ತಿಸುತ್ತಿದ್ದಾರೆ ಎನ್ನುವ ಭಾವನೆ ಪಕ್ಷದಲ್ಲಿತ್ತು.

ಇದನ್ನೂ ಓದಿ – ಸರಕಾರ ಪತನವಾಗಿ ತಿಂಗಳಲ್ಲೇ ಬೀದಿ ಜಗಳಕ್ಕಿಳಿದ ಕಾಂಗ್ರೆಸ್ -ಜೆಡಿಎಸ್

ಅಂತಿಮವಾಗಿ ಯಡಿಯೂರಪ್ಪ ಕಾಂಗ್ರೆಸ್ -ಜೆಡಿಎಸ್ ಸರಕಾರ ಕೆಡವಲು ಯಶಸ್ವಿಯಾದ ನಂತರವೂ ಸರಕಾರ ರಚನೆಗೆ ಹಕ್ಕು ಮಂಡಿಸಲು ಅನುಮತಿ ನೀಡಲು ಬಿಜೆಪಿ ಹೈಕಮಾಂಡ್ ಸಾಕಷ್ಟು ವಿಳಂಬ ಮಾಡಿತು. ಇದಕ್ಕಾಗಿ ಇಲ್ಲಿಂದ ನಿಯೋಗವೇ ದೆಹಲಿಗೆ ತೆರಳಬೇಕಾಯಿತು. ಕಾಡಿ ಬೇಡಿ ಒಪ್ಪಿಗೆ ಪಡೆದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬೇಕಾಯಿತು.

ವಿರೋಧಿಗಳೆದುರು ಮುಜುಗರ

ಇದಾದ ನಂತರವು ಸುಮಾರು 20-25 ದಿನಗಳವರೆಗೆ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ರಚನೆಗೆ ಅನುಮತಿ ಸಿಗಲಿಲ್ಲ. 2 ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ಮಂಡಿಯೂರಬೇಕಾಯಿತು.

ಕೊನೆಗೆ ಸಚಿವಸಂಪುಟ ರಚನೆಯಲ್ಲೂ ಯಡಿಯೂರಪ್ಪ ಸಲ್ಲಿಸಿದ್ದ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಯಿತು. ಈ ವಿಷಯದಲ್ಲೂ ಯಡಿಯೂರಪ್ಪ ಸಾಕಷ್ಟು ಸರ್ಕಸ್ ಮಾಡಬೇಕಾಯಿತು.

ಇದನ್ನೂ ಓದಿ – ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾ ಆ ಒಂದು ಪ್ರಶ್ನೆ?

ರಾಜ್ಯದಲ್ಲಿ ಉಂಟಾಗಿದ್ದ ಭೀಕರ ಪ್ರವಾಹ ಸಂದರ್ಭದಲ್ಲಿ ತಕ್ಷಣ ಪರಿಹಾರ ಬಿಡುಗಡೆ ಮಾಡದೆ ಕೇಂದ್ರ ಯಡಿಯೂರಪ್ಪ ಸರಕಾರವನ್ನು ಕಾಡಿಸಿತು. ಸಾಕಷ್ಟು ಬೇಡಿಕೆ ಸಲ್ಲಿಸಿದಾಗ್ಯೂ ತಕ್ಷಣದ ಪರಿಹಾರವನ್ನೂ ನೀಡದೆ, ಸ್ಪಷ್ಟ ಭರವಸೆಯನ್ನೂ ನೀಡದೆ ವಿಳಂಬ ಧೋರಣೆ ಅನುಸರಿಸಲಾಯಿತು.

ಹೀಗೆ ಎಲ್ಲ ವಿಷಯಗಳಲ್ಲೂ ಯಡಿಯೂರಪ್ಪ ವಿರೋಧ ಪಕ್ಷದ ಎದುರು ಸಾಕಷ್ಟು ಮುಜುಗರ ಅನುಭವಿಸುವಂತಹ ಪರಿಸ್ಥಿತಿಯನ್ನು ಹೈಕಮಾಂಡ್ ಮಾಡುತ್ತ ಬಂದಿದೆ.

ಉಪಮುಖ್ಯಮಂತ್ರಿಗಳ ನೇಮಕ

ಈಗ ಹಲವಾರು ಹಿರಿಯರಿಗೆ ಮಂತ್ರಿಸ್ಥಾನ ನೀಡದೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಯಡಿಯೂರಪ್ಪ ಖಾತೆ ಹಂಚಿಕೆ ವಿಷಯದಲ್ಲೂ ಹೈಕಮಾಂಡ್ ಮರ್ಜಿ ಕಾಯುತ್ತಿದ್ದಾರೆ. ಮತ್ತೆ ದೆಹಲಿಗೆ ತೆರಳಿ ಖಾತೆ ಅಂತಿಮಗೊಳಿಸಿಕೊಂಡು ಬರಬೇಕಾಯಿತು.

ಇದನ್ನೂ ಓದಿ – ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?

ಇದೀಗ, ಹೈಕಮಾಂಡ್ ಗೆ ನಿಷ್ಠರಾಗಿರುವ 2 ಅಥವಾ 3 ಉಪಮುಖ್ಯಮಂತ್ರಿ ನೇಮಕ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಹೈಕಮಾಂಡ್ ಮುಂದಾಗಿದೆ ಎಂದು ಪ್ರಗತಿವಾಹಿನಿಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ. ಲಿಂಬಾವಳಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಸಾಗಬೇಕಾದ ದಾರಿಯನ್ನು ನಿಗದಿಪಡಿಸಲು ಮುಂದಾಗಿದೆ.

ಚುನಾವಣೆಯೋ, ಬದಲಾವಣೆಯೋ?

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ವಿಷಯದಲ್ಲೂ ಹೈಕಮಾಂಡ್ ಯಡಿಯೂರಪ್ಪ ಅರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನೇರವಾಗಿ ಸಂಸದ ನಳೀನ್ ಕುಮಾರ ಕಟೀಲು ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ನಳೀನ್ ಕುಮಾರ ಈವರೆಗೂ ರಾಜ್ಯ ಸುತ್ತಿದವರಲ್ಲ. ಹಲವಾರು ಶಾಸಕ, ಸಂಸದರ ಪರಿಚಯವೇ ಅವರಿಗಿಲ್ಲ. ಅವರ ನೇಮಕ ಬಿಜೆಪಿ ವಲಯದಲ್ಲೇ ಆಶ್ಚರ್ಯ ಮತ್ತು ಅಸಮಾಧಾನಕ್ಕೂ ಕಾರಣವಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರಕಾರದ ಬಗ್ಗೆ ಸಮಾಧಾನ ಹೊಂದಿದಂತೆ ಕಾಣಿಸುತ್ತಿಲ್ಲ.

ಹಾಗಾಗಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯನ್ನೇ ಬದಲಾಯಿಸಲಾಗುತ್ತದೆಯೋ, ಅಥವಾ ಚುನಾಣೆಯತ್ತ ಸರಿಯಲು ಚಿಂತನೆ ನಡೆಸುತ್ತಿದೆಯೋ ಎನ್ನುವ ಅನುಮಾನ ಬರುವಂತಾಗಿದೆ. 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button