*ಪಾಲಿಕೆಗೆ ಹೈ ಕೊರ್ಟ್ ಚಾಟಿ: ರಸ್ತೆ ಬಂದ್ ಮಾಡಿ ಭೂ ಮಾಲೀಕರಿಗೆ ಜಾಗ ವಾಪಸ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಶಿವಸೃಷ್ಟಿ ಎದುರಿನ ರಸ್ತೆ ಅಗಲೀಕರಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ರಸ್ತೆ ನಿರ್ಮಿಸಿರುವುದು ಹಲವು ವಿವಾದಕ್ಕೆ ಕಾರಣವಾಗಿತ್ತು. ಪಾಲಿಕೆಗೆ ಹೈ ಕೊರ್ಟ್ ಚಾಟಿ ಬೀಸಿದ ಬಳಿಕ ಜಾಗವನ್ನು ಭೂ ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದ್ದಾರೆ.
ಈ ಮೊದಲು ಜಾಗದ ವಿವಾದದ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿರುವಾಗ ನ್ಯಾಯಾಲಯ ಪರಿಹಾರ ಕೊಡಲು 20 ಕೋಟಿ ರೂ ಗಳನ್ನು ಉಪ ವಿಭಾಗಾಧಿಕಾರಿಗಳ ಬಳಿ ಡಿಪಾಜಿಟ್ ಮಾಡುವಂತೆ ನಿರ್ದೇಶನ ನೀಡಿತ್ತು. ಈ ವಿಚಾರವಾಗಿ ಬೆಳಗಾವಿ ಪಾಲಿಕೆ ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆಯ ವಿಶೇಷ ಸಭೆ ನಡೆಸಿ ನ್ಯಾಯಾಲಯದ ನಿರ್ದೇಶನ ಪಾಲಿಸಿತ್ತು.
ಆದರೆ ವಿಚಾರಣೆ ಮುಂದುರೆದಾಗ ನೀವು ಜಾಗ ವಾಪಸ್ ಕೊಡ್ತೀರಾ ಇಲ್ಲ ಪರಿಹಾರ ಕೊಡ್ತೀರಾ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ ಸಂಧರ್ಭದಲ್ಲಿ ಜಾಗದ ಮಾಲೀಕರ ನ್ಯಾಯವಾದಿ ಹಾಗು ಪಾಲಿಕೆ ಅಧಿಕಾರಿಗಳು ಇಬ್ಬರೂ ಪರಸ್ಪರ ಜಾಗ ವಾಪಸ್ ಕೊಡುವ ವಿಚಾರಕ್ಕೆ ಸಮ್ಮತಿ ನೀಡಿದ ಕಾರಣ ಕೋರ್ಟ್ ನಿರ್ದೇಶನದಂತೆ ಇವತ್ತು ಜಾಗವನ್ನು ವಾಪಸ್ ಕೊಟ್ಟಿದ್ದಾರೆ.
ಭೂಸ್ವಾಧೀನ ಮಾಡಿಕೊಳ್ಳದೇ ಪರಿಹಾರ ಕೊಡದೇ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಾಲಗಿತ್ತು. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂಡಿ, ಮತ್ತು ಬೆಳಗಾವಿ ಉಪ ವಿಭಾಗಾಧಿಕಾರಿಗಳ ಸಮ್ಮುಖದಲ್ಲಿ ಗೌರವದಿಂದ ಭೂ ಮಾಲೀಕರಿಗೆ ಸೋಮವಾರದ ಒಳಗೆ ಜಾಗ ಹಸ್ತಾಂತರ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ಹಸ್ತಾಂತರ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ