*BREAKING: ಸಾರಿಗೆ ಮುಷ್ಕರ: ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಪಿಐಎಲ್ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ಮುಖ್ಯನ್ಯಾಯಮೂರ್ತಿ ವಿಭು ಬಕ್ರು, ಸಾರಿಗೆ ನೌಕರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು.
ಸಾರಿಗೆ ಮುಷ್ಕರವನ್ನು ಒಂದು ದಿನದಮಟ್ಟಿಗೆ ಮುಂದೂಡುವಂತೆ ನಿನ್ನೆ ಹೈಕೋರ್ಟ್ ಸೂಚಿಸಿತ್ತು. ಇಂದು ಮುಖ್ಯನ್ಯಾಯಮೂರ್ತಿ ಪೀಠದಲ್ಲಿಯೇ ವಿಚಾರಣೆ ನಡೆಯಲಿದೆ. ತೀರ್ಪು ಬಂದ ಬಳಿಕ ಮುಷ್ಕರದ ಬಗ್ಗೆ ತೀರ್ಮಾನಿಸಿ. ಹಾಗಾಗಿ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ನ್ಯಾಯಾಲಯ ಹೇಳಿತ್ತು. ಕೋರ್ಟ್ ಸೂಚನೆ ಹೊರತಾಗಿಯೂ ಇಂದು ಮುಂಜಾನೆಯಿಂದಲೇ ಸಾರಿಗೆ ನೌಕರರ ಮುಷ್ಕರ ಆರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಯಾಣಿಕರು ಬಸ್ ಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇಂದು ಮಧ್ಯಾಹ್ನ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಭಕ್ರು, ಹೈಕೋರ್ಟ್ ಸೂಚನೆಯಂದೆ ಒಂದುದಿನದ ಮಟ್ಟಿಗೆ ಸಾರಿಗೆ ಮುಷ್ಕರ ಮುಂದೂಡಲಾಗಿತ್ತೇ? ಎಂದು ಪ್ರಶ್ನಿಸಿದ್ದಾರೆ. ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡುವುದನ್ನು ನಾವು ಸಹಿಸಲ್ಲ. ನಿಮ್ಮ ಹಾಗೂ ಸರ್ಕಾರದ ನಡುವಿನ ಸಂಘರ್ಷಕ್ಕೆ ಜನರಿಗೆ ತೊಂದರೆಯಾಗಬಾರದು. ಮುಷ್ಕರವನ್ನು ಒಂದುದಿನದ ಮಟ್ಟಿಗೆ ಮುಂದೂಡಲು ಹೇಳಿದ್ದರೂ ಮುಷ್ಕರ ನಡೆಸುತ್ತಿರುವುದು ಯಾಕೆ? ಎಂದು ಖಡಕ್ ಆಗಿ ಪ್ರಶ್ನಿಸಿದೆ. ಮುಷ್ಕರ ನಿಂತಿದೆಯೇ ಎಂಬ ಬಗ್ಗೆ ನಾಳೆ ಸ್ಪಷ್ಟವಾಗಿ ಉತ್ತರ ನೀಡಬೇಕು. ಇಲ್ಲವಾದಲ್ಲಿ ನಾಳೆ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಸಾರುಗೆ ನೌಕರರ ಪರ ವಕೀಲರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.