Kannada NewsKarnataka NewsLatest

*ಮಾತೃತ್ವದ ರಜೆ ವಿಚಾರವಾಗಿ ಮಹತ್ವದ ಆದೇಶ ನೀಡಿದ ಹೈಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಮಗು ಜನಿಸಿದ ಕಾರಣ ನೀಡಿ ಮಾತೃತ್ವದ ರಜೆ ಪಡೆಯುವ ಸರ್ಕಾರಿ ಉದ್ಯೋಗಿಗಳು ದೀರ್ಘಕಾಲ ಗೈರಾಗುವ ವಿಚಾರವಾಗಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಮಾತೃತ್ವ ರಜೆಯನ್ನು ದೀರ್ಘಕಾಲದ ಅನಧಿಕೃತ ಗೈರುಹಾಜರಿಗೆ “ಅನುಕೂಲಕರ ಗುರಾಣಿ”ಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಕ್ರಮವನ್ನು ಎತ್ತಿಹಿಡಿದಿದೆ.

ಅನಧಿಕೃತ ಗೈರು ಹಾಜರಿಯಾಗಿದ್ದ ಪರಿಣಾಮ ಸೇವೆಯಿಂದ ವಜಾಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾಫ್ಟ್​ವೇರ್‌ ಇಂಜಿನಿಯರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಮುಖ ಆದೇಶ ನೀಡಿದೆ.

ಮಾತೃತ್ವ ರಜೆಯು ಘನತೆ, ಮಾತೃತ್ವ ಮತ್ತು ಸಾಮಾಜಿಕ ಸಮಾನತೆ ಮೇಲಿನ ಸಾಂವಿಧಾನಿಕ ಬದ್ಧತೆಯಾಗಿದೆ. ಆದರೆ ಯಾವುದೇ ಹಕ್ಕು ಪವಿತ್ರವಾಗಿದ್ದರೂ, ಅದು ಅನಧಿಕೃತ ಗೈರುಹಾಜರಿಗೆ ‘ಅಕ್ಷಯ ಪಾತ್ರೆ’ಯಾಗುವಂತೆ ಅದರ ಕಾನೂನುಬದ್ಧ ಗಡಿಗಳನ್ನು ಮೀರಿ ವಿಸ್ತರಿಸಲಾಗದು.

ಅರ್ಜಿದಾರರು ಕಾನೂನುಬದ್ಧವಾಗಿ ಸಿಗಬೇಕಾದ ಮಾತೃತ್ವ ರಜೆಯನ್ನು ಪೂರ್ಣವಾಗಿ ಬಳಸಿಕೊಂಡ ಬಳಿಕವೂ, ಬೇರೆ ವರ್ಗದ ರಜೆಗಳನ್ನು ಪಡೆದಿದ್ದರು. ಆ ಎಲ್ಲಾ ರಜೆಗಳ ಅವಧಿ ಮುಗಿದ ನಂತರವೂ ಯಾವುದೇ ಅಧಿಕೃತ ಅನುಮತಿಯಿಲ್ಲದೆ ದೀರ್ಘಕಾಲ ಗೈರು ಹಾಜರಾಗಿದ್ದಾರೆ ಎಂಬ ಅಂಶ ದಾಖಲೆಗಳಿಂದ ತಿಳಿಯಲಿದೆ.

ಆದರೆ, ಸರ್ಕಾರಿ ಉದ್ಯೋಗವೆಂದರೆ ಅದು ಜವಾಬ್ದಾರಿಯುತ ಸ್ಥಾನವಾಗಿದ್ದು, ಕರ್ತವ್ಯನಿಷ್ಠೆ ಮತ್ತು ಶಿಸ್ತನ್ನು ಅಪೇಕ್ಷಿಸುತ್ತದೆ. ಅರ್ಹರಾದ ಅಸಂಖ್ಯಾತ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಯಾರೂ ಉದಾಸೀನದಿಂದ ನಡೆಸಿಕೊಳ್ಳುವಂತಿಲ್ಲ. ಮಗುವಿನ ಜನನವನ್ನು ಕಾರಣವಾಗಿ ನೀಡಿ ಸರ್ಕಾರಿ ಉದ್ಯೋಗದ ಜವಾಬ್ದಾರಿಗಳಿಂದ ಶಾಶ್ವತವಾಗಿ ದೂರ ಉಳಿಯುದಕ್ಕೆ ಅವಕಾಶವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರಿಗೆ ಸಿಗಬೇಕಾದ ಮಾತೃತ್ವ ರಜೆಯನ್ನು ಎಂದಿಗೂ ನಿರಾಕರಿಸಲಾಗಿಲ್ಲ. ಆದರೆ, ಆ ರಜೆಗಳು ಮುಗಿದ ನಂತರದ ಅನಧಿಕೃತ ಗೈರು ಹಾಜರಾತಿಯನ್ನು ಸಮರ್ಥಿಸಿಕೊಳ್ಳಲು ಮಾತೃತ್ವ ರಜೆಯನ್ನು ಅಸ್ತ್ರವನ್ನಾಗಿ ಬಳಸಲು ಬರುವುದಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರು 2019ರ ಜೂನ್ 6 ರಂದು ಹೈಕೋರ್ಟ್‌ನಲ್ಲಿ ಸಾಫ್ಟ್‌ವೇರ್ ತಂತ್ರಜ್ಞರಾಗಿ ಪ್ರೊಬೇಷನರಿ ಹುದ್ದೆಗೆ ನೇಮಕಗೊಂಡಿದ್ದರು. 2023ರ ಜುಲೈ 1 ರಂದು ಅವರು ಮಾತೃತ್ವ ರಜೆ ಪಡೆದಿದ್ದು, ಆ ಬಳಿಕ ವಿವಿಧ ಕಾರಣಗಳಿಂದ 2024ರ ಆಗಸ್ಟ್ 14 ರವರೆಗೆ ತಮ್ಮ ರಜೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಿದ್ದರು.

2024ರ ಸೆಪ್ಟೆಂಬರ್ 25 ರಂದು, ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಅರ್ಜಿದಾರರ ಮಗುವನ್ನು ನೋಡಿಕೊಳ್ಳಲು ನಮ್ಮ ಜೊತೆ ಯಾರೂ ಇಲ್ಲ. ಪದೇ ಪದೇ ಆರೋಗ್ಯ ಸಮಸ್ಯೆ ಎದುರಾಗುತ್ತಿವೆ. ಆದ್ದರಿಂದ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ವಿವರಿಸಿದ್ದರು. ಅಷ್ಟೇ ಅಲ್ಲದೆ, ಮತ್ತಷ್ಟು ದಿನಗಳ ಕಾಲ ರಜೆ ವಿಸ್ತರಣೆ ಮಾಡುವಂತೆ ಕೋರಿದ್ದರು.

ಇದರಿಂದ ಅರ್ಜಿದಾರರ ಇನ್ನೂ ಪ್ರೊಬೇಷನರಿ ಅವಧಿಯಲ್ಲಿದ್ದು, ಪದೇ ಪದೇ ರಜೆ ವಿಸ್ತರಣೆ ಕೋರುತ್ತಿರುವುದರಿಂದ ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಅವರು ಹುದ್ದೆಗೆ ಸೂಕ್ತವಲ್ಲ ಎಂದು ತಿಳಿಸಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ 2025ರ ಎಪ್ರಿಲ್ 15 ರಂದು ಸೇವೆಯಿಂದ ಬಿಡುಗಡೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button